ಚಿತ್ರದುರ್ಗ: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗುವಂತೆ ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ನವೆಂಬರ್ ನಿಂದ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಶನಿವಾರ ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ, ಯುವಕರಿಗೆ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸಲು ವಿವೇಕಾನಂದ ಯುವ ಶಕ್ತಿ ಯೋಜನೆ ರೂಪಿಸಿದ್ದು, ನವೆಂಬರ್ ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಸ್ವಾವಲಂಬಿ ಬದುಕು ಸಾಗಿಸಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಸ್ತ್ರೀಶಕ್ತಿ ಸಾಮರ್ಥ್ಯ ಹಾಗೂ ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ರೂಪಿಸಲಾಗಿದ್ದು, ನವೆಂಬರ್ ನಲ್ಲಿ ಇವೆರಡು ಯೋಜನೆ ಜಾರಿಯಾಗಲಿವೆ. ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ಅಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ. ನೆರವು ನೀಡಲಾಗುವುದು. ಅವರಿಂದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಪ್ರತಿ ಗ್ರಾಮದ ಎರಡು ಯುವಕ ಸಂಘಗಳಿಗೆ ತಲ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.