ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ. 22 ವರ್ಷದ ನಂತರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಶಶಿ ತರೂರ್ ನಡುವೆ ತೀವ್ರ ಪೈಪೋಟಿ ಇದೆ. ಯಾರೇ ಗೆದ್ದರೂ 24 ವರ್ಷದ ಬಳಿಕ ಗಾಂಧಿಯೇತರ ಕುಟುಂಬ ಚುಕ್ಕಾಣಿ ಹಿಡಿದಂತೆ ಆಗಲಿದೆ. ದೇಶದ 65 ಕಡೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 9100 ಜನ ಮತದಾನ ಮಾಡಲಿದ್ದಾರೆ. ನಾಡಿದ್ದು ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಗುಪ್ತ ಮತದಾನದ ಮೂಲಕ ಮತದಾನ ನಡೆಯಲಿದೆ. ಎಲ್ಲಾ ಬ್ಯಾಲೆಟ್ ಬಾಕ್ಸ್ ಗಳನ್ನು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ತರಲಾಗುತ್ತದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಮುಗಿದ ತಕ್ಷಣ ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ರಾಹುಲ್ ಗಾಂಧಿ ಪಿಸಿಸಿ ಪ್ರತಿನಿಧಿಗಳಾದ ಸುಮಾರು 40 ಭಾರತ ಯಾತ್ರಿಗಳೊಂದಿಗೆ ಬಳ್ಳಾರಿಯ ಸಂಗನಕಲ್ಲುನಲ್ಲಿರುವ ಭಾರತ್ ಜೋಡೋ ಯಾತ್ರಾ ಕ್ಯಾಂಪ್ ಸೈಟ್ ನಲ್ಲಿ ಮತದಾನ ಮಾಡಲಿದ್ದಾರೆ.
ಕಾಂಗ್ರೆಸ್ನ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ. ಅಕ್ಟೋಬರ್ 17 ರ ಚುನಾವಣೆಗಾಗಿ, ಎಲ್ಲಾ ರಾಜ್ಯಗಳಲ್ಲಿ 65 ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರ ತಿಳಿಸಿದೆ.