ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಲಿದೆ. ಈ ಗೆಲುವಿನೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಲವಾರು ದಾಖಲೆ ಬರೆದಿದ್ದಾರೆ.
1 ಉತ್ತರ ಪ್ರದೇಶದಲ್ಲಿ ಐದು ವರ್ಷ ಅಧಿಕಾರ ಪೂರ್ಣಗೊಳಿಸಿ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಿದ್ದಾರೆ.
2 ಅಲ್ಲದೇ ಅವರು, ಸತತ ಎರಡನೇ ಅವಧಿಗೆ ಗೆಲುವು ಸಾಧಿಸಿದ 5ನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
3 ಕಳೆದ 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಏಕೈಕ ಮುಖ್ಯಮಂತ್ರಿ ಎನ್ನುವ ದಾಖಲೆಗೆ ಅವರು ಪಾತ್ರರಾಗಿದ್ದಾರೆ.
4 ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಮರಳಿದ ಮೊದಲ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಾಗಿದ್ದಾರೆ.
5 15 ವರ್ಷಗಳಲ್ಲಿ ಮೊದಲ ಸಲ ಶಾಸಕರಾಗಿ ಮುಖ್ಯಮಂತ್ರಿ. ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
6 ನೋಯ್ಡಾ ಭೇಟಿಯ ಮೂಢನಂಬಿಕೆ ಮುರಿದ ಮೊದಲ ಮುಖ್ಯಮಂತ್ರಿ ಯೋಗಿ ಅವರಾಗಿದ್ದಾರೆ. ನಮ್ಮಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬೆಳೆದು ಬಂದಿದೆ. ಅದೇ ರೀತಿ ನೋಯ್ಡಾಗೆ ಭೇಟಿ ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆಯನ್ನು ಯೋಗಿ ಸುಳ್ಳು ಮಾಡಿದ್ದಾರೆ. ನೋಯ್ಡಾಗೆ ಭೇಟಿ ನೀಡಿದ್ದ ಅವರು ಜಯಗಳಿಸಿ, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.