ಆಟೋಪೈಲಟ್ ಮೋಡ್‌ನಲ್ಲಿ ತನ್ನ ಕಾರುಗಳನ್ನು ನಿಖರವಾಗಿ ಚಲಿಸುವಂತೆ ಅಭಿವೃದ್ಧಿಪಡಿಸುವಲ್ಲಿ ಟೆಸ್ಲಾ ಕಂಪನಿಯು ಯಾವುದೇ ಕಸರತ್ತು ಕಮ್ಮಿ ಮಾಡಿಲ್ಲ. ಸೆಲ್ಫ್ ಡ್ರೈವ್ ವೈಶಿಷ್ಟ್ಯತೆಯನ್ನು ಜನರಿಗೆ ಹುಚ್ಚು ಹಿಡಿಸಲು ಶತಾಯಗತಾಯ ಎಲ್ಲ ಸಂಪನ್ಮೂಲಗಳನ್ನು ಬಳಸುತ್ತಾ, ತನ್ನ ವಿವಿಧ ಮಾಡೆಲ್ ಕಾರುಗಳನ್ನು ಟೆಸ್ಲಾ ಕಂಪನಿಯು ಮಾರುಕಟ್ಟೆಗೆ ಬಿಡುತ್ತಿದೆ.
ಈ ನಡುವೆ ಟೆಸ್ಲಾದ ಎಸ್ ಮಾಡೆಲ್ ಕಾರೊಂದು ಫುಲ್ ಸೆಲ್ಫ್ ಡ್ರೈವ್ (ಎಫ್‌ಎಸ್‌ಡಿ) ಮೋಡ್‌ನಲ್ಲಿ ಚಲಿಸುತ್ತಿದ್ದಾಗ ರಸ್ತೆಯ ಪಕ್ಕದ ಪಾದಚಾರಿ ಮಾರ್ಗಕ್ಕೆ ಗುದ್ದಿದೆ. ಟೈರ್‌ಗಳು ಜಖಂಗೊಂಡಿದೆ. ಅದು ಕೂಡ ವಿಶೇಷವೆಂದರೆ ಕಾರು ರಾತ್ರಿಯ ವೇಳೆ ಖಾಲಿ ರಸ್ತೆಯಲ್ಲಿ ಚಲಿಸುತ್ತಿತ್ತು…!
ಈ ಬಗ್ಗೆ ಯೂಟ್ಯೂಬ್‌ನಲ್ಲಿ ಕಾರಿನ ಮಾಲೀಕ ಡೇವಿಡ್ ಗಿಗಿಲೊ ವಿಡಿಯೊ ಹಾಕಿದ್ದಾರೆ. ಇದೇನಾ ನಿಮ್ಮ ಕಂಪನಿಯ ನಿಖರ ಎಫ್‌ಎಸ್‌ಡಿ ಮೋಡ್ ಎಂದು ಖಾರವಾಗಿ ಟೆಸ್ಲಾ ಕಂಪನಿಗೆ ಪ್ರಶ್ನಿಸಿದ್ದಾರೆ. ಯಾವುದೇ ಕಾರಣಕ್ಕೂ ಸೆಲ್ಫ್ ಡ್ರೈವ್ ಮೋಡ್ ನಂಬಿಕೆ ಅರ್ಹವಾಗಿಲ್ಲ. ಡ್ರೈವರ್ ನಿಗಾದಲ್ಲಿಯೇ ಟೆಸ್ಲಾ ಕಾರುಗಳು ಚಲಿಸಬೇಕು ಎಂದಿದ್ದಾರೆ.
ಕುಡಿತದ ನಶೆಯಲ್ಲಿದ್ದ ಚಾಲಕನ ಪ್ರಾಣ ಕಾಪಾಡಿದ ಟೆಸ್ಲಾ ಆಟೋಪೈಲಟ್
2021ರ ಆಗಸ್ಟ್‌ನಲ್ಲಿ ಅಮೆರಿಕದ ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ನಿರ್ದೇಶನಾಲಯವು ಟೆಸ್ಲಾದ ಆಟೋಪೈಲಟ್ ವಿರುದ್ಧ ದೊಡ್ಡ ತನಿಖೆ ಶುರು ಮಾಡಿದೆ. ಸುಮಾರು 7.65 ಲಕ್ಷ ಟೆಸ್ಲಾ ಕಾರುಗಳು ಹಾಗೂ ಟೆಸ್ಲಾದ ಆಟೋಪೈಲಟ್ ಅಳವಡಿಸಲಾಗಿರುವ ತುರ್ತು ಬಳಕೆ ವಾಹನಗಳ ಅಪಘಾತದ ಬಗ್ಗೆ ಕೂಲಂಕುಷ ತನಿಖೆ ನಡೆಸುತ್ತಿದೆ. ಆಟೋಪೈಲಟ್ ಮೋಡ್‌ನಲ್ಲಿ ಕಾರಿನ ಸ್ವಯಂ ಚಾಲನೆಗೆ ಟೆಸ್ಲಾ ಕಂಪನಿಯು ಕಾರಿಗೆ ಸೆನ್ಸಾರ್‌ಗಳನ್ನು ಮತ್ತು ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳನ್ನೇ ಆಶ್ರಯಿಸಿದೆ.