ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದ 25 ವರ್ಷದ ಮಹಿಳೆಯನ್ನು ಅತ್ಯಂತ ತ್ವರಿತ ಕಾರ್ಯಾಚರಣೆಯ ಮೂಲಕ ದೆಹಲಿ ಪೊಲೀಸರು ಪತ್ತೆ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. ಈ ಕಾರ್ಯಾಚರಣೆಯನ್ನು ನಡೆಸಲು ದೆಹಲಿ ಪೊಲೀಸರು 8 ನಿಮಿಷಗಳಿಗಿಂತಲೂ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ಸ್ಟಾಗ್ರಾಂ ಲೈವ್ ಮಾಡುತ್ತಲೇ ಸ್ಯಾನಿಟೈಸರ್ ಸೇವನೆ ಮಾಡಿದ್ದ ಮಹಿಳೆಯು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದಳು. ಈಕೆ ತನ್ನ ಪತಿಯೊಂದಿಗೆ ವಾಸವಿದ್ದಳು.
ಈ ಪ್ರಕರಣದ ವಿಚಾರವಾಗಿ ಮಾತನಾಡಿದ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ನಾವು ಸೈಬರ್ ಸೆಲ್ನಿಂದ ರಾತ್ರಿ 9:55ರ ಸುಮಾರಿಗೆ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿದ್ದೆವು. ಸೈಬರ್ ಸೆಲ್ ತಂಡ ನಮಗೆ ಈ ವಿಡಿಯೋ ಯಾವ ಏರಿಯಾದಿಂದ ಚಿತ್ರೀಕರಿಸಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತ್ತು.
ನಾವು ಕೂಡಲೇ ಸ್ಟೇಷನ್ ಹೌಸ್ ಆಫೀಸರ್ ರಾಜೇಂದ್ರ ಪ್ರಸಾದ್ರನ್ನು ಸಂಪರ್ಕಿಸಿದೆವು. ಹಾಗೂ ಆ ಏರಿಯಾದಲ್ಲಿದ್ದ ಮಹಿಳೆಗಾಗಿ ತಲಾಶ್ ಆರಂಭವಾಯ್ತು. ಆಕೆಯ ಸರಿಯಾದ ವಿಳಾಸವನ್ನು ಪಡೆದುಕೊಳ್ಳಲು ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಲಾಗಿತ್ತು ಎಂದು ಹೇಳಿದರು.
10:02ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೂಡಲೇ ಆಕೆಯ ಪತಿ ಹಾಗೂ ಸಹೋದರನಿಗೆ ವಿಷಯ ಮುಟ್ಟಿಸಲಾಗಿದೆ. ವಿಚಾರಣೆಯ ವೇಳೆ ಆಕೆ ಜೀವನದಲ್ಲಿ ಜಿಗುಪ್ಸೆ ಬಂದು ಈ ರೀತಿ ಮಾಡಲು ಮುಂದಾಗಿದ್ದೆ ಎಂದು ಹೇಳಿದ್ದಾಳೆ ಎನ್ನಲಾಗಿದೆ.