ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಹಾಗೂ ಟೀಂ ಇಂಡಿಯಾ ಸೀಮಿತ ಓವರ್ಗಳ ತಂಡದ ನಾಯಕ ರೋಹಿತ್ ಶರ್ಮಾ ಜೊತೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಈ ವಿಚಾರವನ್ನು ಪದೇ ಪದೇ ಸ್ಪಷ್ಟಪಡಿಸುತ್ತಾ ನಾನು ಆಯಾಸಗೊಂಡಿದ್ದೇನೆ ಎಂದು ಪುನರುಚ್ಛರಿಸಿದರು.
ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ನನ್ನ ಹಾಗೂ ರೋಹಿತ್ ಶರ್ಮಾ ನಡುವಿನ ಸಂಬಂಧ ಹದಗೆಟ್ಟಿಲ್ಲ. ನಾವು ಚೆನ್ನಾಗಿಯೇ ಇದ್ದೇವೆ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ನನ್ನ ಹಾಗೂ ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 2 ರಿಂದ ಎರಡೂವರೆ ವರ್ಷಗಳಿಂದ ನಾನು ಈ ವಿಚಾರವನ್ನು ಸ್ಪಷ್ಟಪಡಿಸುತ್ತಲೇ ಇದ್ದೇನೆ. ಈ ಮಾತನ್ನು ಹೇಳಿ ನನಗೆ ಸುಸ್ತಾಗಿ ಹೋಗಿದೆ. ಪದೇ ಪದೇ ಇದೇ ಪ್ರಶ್ನೆಯನ್ನು ಕೇಳಲಾಗುತ್ತಿದೆ. ನಾನು ಎಲ್ಲಿಯವರೆಗೆ ಕ್ರಿಕೆಟ್ ಜೀವನದಲ್ಲಿ ಇರುತ್ತೇನೆಯೋ ಅಲ್ಲಿಯವರೆಗೂ ನನ್ನ ನಡೆ ಹಾಗೂ ನುಡಿಗಳಿಂದ ತಂಡವನ್ನು ಎಂದಿಗೂ ತಲೆತಗ್ಗಿಸುವಂತೆ ಮಾಡೋದಿಲ್ಲ ಎಂದು ಹೇಳಿದ್ದಾರೆ.