ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೀತಾರಾಮಶಾಸ್ತ್ರಿ ಎರಡು ದಿನಗಳ ಹಿಂದೆ ಸಿಕಂದರಾಬಾದ್ ನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
ಗೀತ ರಚನೆಕಾರರಾಗಿ ಜನಮನ್ನಣೆಗಳಿಸಿದ್ದ ಸಿರಿವೆನ್ನೆಲ 165ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡು ಬರೆದಿದ್ದರು. 3000ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ಮೊದಲ ಚಿತ್ರ ಕೆ.ವಿಶ್ವನಾಥ್ ಅವರ ಸಿರಿವೆನ್ನೆಲ ಚಿತ್ರದ ಮೂಲಕ ಖ್ಯಾತಿಗಳಿಸಿದ್ದ ಸೀತಾರಾಮಶಾಸ್ತ್ರಿ ಅವರ, ಸ್ವಯಂ ಕೃಷಿ, ಸ್ವರಣ ಕಮಲಂ, ಶಿವ, ಕ್ಷಣ ಕ್ಷಣಂ, ಸ್ವಾತಿ ಕಿರಣಂ, ಗೋವಿಂದ ಗೋವಿಂದ, ಅಪರಾಧಿ, ಗುಲಾಬಿ, ಮುರಾರಿ, ಅಲಾ ವೈಕುಂಠಪುರಮುಲೋ ಮೊದಲಾದ ಚಿತ್ರದ ಹಾಡುಗಳು ಜನಪ್ರಿಯತೆ ಪಡೆದಿದ್ದವು.
2019ರಲ್ಲಿ ಸಿರಿವೆನ್ನೆಲ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಲಾಗಿತ್ತು. 11 ನಂದಿ ಅವಾರ್ಡ್, 4 ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಹಿರಿಯ ಸಾಹಿತಿಯ ಅಗಲಿಕೆಗೆ ಇಡೀ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.