ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಲಂಚಾವತಾರದ ಪ್ರಕರಣವು ದಾಖಲಾದ ಬಳಿಕ ಡ್ರಗ್ಸ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ಇದೀಗ ಸಾಕಷ್ಟು ಜನರ ಹೆಸರು ಬಯಲಿಗೆ ಬರುತ್ತಿದೆ.
ಸಮೀರ್ ವಾಂಖೆಡೆ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಇಂದು ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಸಮೀರ್ ವಾಂಖೆಡೆ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಹೊರಿಸಿದ್ದ ನವಾಬ್ ಮಲ್ಲಿಕ್ ಇಂದು ಮತ್ತೊಮ್ಮೆ ಮಾಧ್ಯಮಗಳ ಮುಂದೆ ಬಂದಿದ್ದು ಡ್ರಗ್ ಪೆಡ್ಲರ್ ಜೊತೆ ಸಮೀರ್ ವಾಂಖೆಡೆ ಸಂಬಂಧ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಆ ದಿನ ನಡೆದ ಕ್ರೂಸ್ ಪಾರ್ಟಿಯಲ್ಲಿ ವಾಂಖೆಡೆ ಸ್ನೇಹಿತ ಎನ್ನಲಾದ ಗಡ್ಡಧಾರಿ ವ್ಯಕ್ತಿ ಕೂಡ ಹಾಜರಿದ್ದನು. ಎನ್ಸಿಬಿಯಲ್ಲಿರುವ ಪ್ರತಿಯೊಬ್ಬರಿಗೂ ಆ ಗಡ್ಡಧಾರಿ ವ್ಯಕ್ತಿ ಯಾರೆಂದು ತಿಳಿದಿದೆ. ಈ ಬಗ್ಗೆಯೂ ಎನ್ಸಿಬಿ ತನಿಖೆ ನಡೆಸಲೇಬೇಕಾದ ಅಗತ್ಯವಿದೆ. ಈತ ಸಮೀರ್ ವಾಂಖೆಡೆಯ ಸ್ನೇಹಿತ ಎಂದು ನನಗೆ ಗುಮಾನಿ ಇದೆ ಎಂದು ಹೇಳಿದ್ದಾರೆ .
ನಿನ್ನೆ ಕೂಡ ಸಮೀರ್ ವಾಂಖೆಡೆ ವಿರುದ್ಧ ಹರಿಹಾಯ್ದಿದ್ದ ನವಾಬ್ ಮಲ್ಲಿಕ್ ಮುಂಬೈ ಹಾಗೂ ಥಾಣೆಯಲ್ಲಿ ಇಬ್ಬರು ವ್ಯಕ್ತಿಗಳ ಸಹಾಯದಿಂದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ನನ್ನ ಹಾಗೂ ನನ್ನ ಕುಟುಂಬಸ್ಥರ ಫೋನ್ ಕರೆಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮಲ್ಲಿಕ್ ಡ್ರಗ್ ಪೆಡ್ಲರ್ಗಳ ಜೊತೆ ವಾಂಖೆಡೆ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಈ ನಡುವೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಮುಂಬೈ ಪೊಲೀಸರು ಎಸಿಪಿ ಮಟ್ಟದ ವಿಶೇಷ ಅಧಿಕಾರಿಯನ್ನು ನೇಮಿಸಿದ್ದಾರೆ. ಈ ಅಧಿಕಾರಿಯು ಸಮೀರ್ ವಾಂಖೆಡೆ ವಿರುದ್ಧ ದಾಖಲಾದ ನಾಲ್ಕು ಪ್ರಕರಣಗಳ ತನಿಖೆ ನಡೆಸಲಿದ್ದಾರೆ ಎಂದು ಮುಂಬೈ ಪೊಲೀಸ್ ಇಲಾಖೆ ಹೇಳಿದೆ.