ಆ್ಯಪಲ್ ಕಂಪನಿಯ ಹೊಸ ಫೋನ್ ಐ ಫೋನ್ 13 ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ ಎಂದು ಹೇಳಲಾಗ್ತಿದೆ.
ಹಲವು ನಿರೀಕ್ಷೆಗಳನ್ನು ಹೊತ್ತು ತರುತ್ತಿರುವ ಈ ಮೊಬೈಲ್ನಲ್ಲಿ 120 ಹರ್ಟ್ಸ್ ಪ್ರೋ ಮೋಷನ್ ಪರದೆ, ಅತ್ಯುತ್ತಮ ಗುಣಮಟ್ಟದ ಕ್ಯಾಮರಾ, ಎ 15 ಬಯಾನಿಕ್ ಪ್ರೊಸೆಸರ್ ಜೊತೆಯಲ್ಲಿ ಮಾಸ್ಕ್ ಧರಿಸುತ್ತಿರುವ ವಿಶ್ವಕ್ಕೆ ಹೊಂದಿಕೆಯಾಗುವಂತಹ ಸೌಲಭ್ಯಗಳನ್ನೂ ಹೊಂದಿರಲಿದೆ ಎಂದು ಹೇಳಲಾಗಿದೆ.
ಅಂದರೆ ಮಾಸ್ಕ್ ಧರಿಸಿಯೂ ಫೇಸ್ ಐಡಿಯನ್ನು ಬಳಕೆ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.
ಜಾನ್ ಪ್ರೋಸರ್ಸ್ ಫ್ರಂಟ್ ಪೇಜ್ ಟೆಕ್ ನೀಡಿರುವ ಆಂತರಿಕ ಮಾಹಿತಿಯ ಪ್ರಕಾರ ಐ ಫೋನ್ 13 ಸುಧಾರಿತ ಫೇಸ್ ಐಡಿ ವ್ಯವಸ್ಥೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಸುಧಾರಿತ ಫೇಸ್ ಐಡಿ ಮೂಲಕ ಮಾಸ್ಕ್ ಅಥವಾ ಕನ್ನಡಕ ಧರಿಸಿಯೂ ಫೇಸ್ ಐಡಿ ಮೂಲಕ ಮೊಬೈಲ್ ಫೋನ್ ಅನ್ಲಾಕ್ ಮಾಡಬಹುದಾಗಿದೆ.
ಐಫೋನ್ ಪ್ರೈವೆಸಿಯ ಅಡಿಯಲ್ಲಿ ಬರುವ ಫೇಸ್ ಐಡಿಯು ಅತ್ಯಂತ ಸುರಕ್ಷಿತ ಲಾಕಿಂಗ್ ವಿಧಾನವಾಗಿದೆ. ಆದರೆ ಮಾಸ್ಕ್ ಕಾರಣದಿಂದಾಗಿ ಫೇಸ್ ಲಾಕ್ ಬಳಕೆ ಮಾಡುವುದು ಕೊಂಚ ಕಷ್ಟವಾಗುತ್ತಿದೆ. ಹೀಗಾಗಿ ಐಫೋನ್ 13 ಈ ಸುಧಾರಿತ ವೈಶಿಷ್ಟ್ಯ ಹೊಂದಿರಲಿದೆ ಎಂಬ ಸುದ್ದಿಯೋ ಐ ಫೋನ್ ಪ್ರಿಯರ ಕಣ್ಣರಳಿಸಿದೆ.