ಬಹುದಿನಗಳ ನಂತರ ರಾಜ್ಯದಲ್ಲಿ ಸೋಮವಾರದಿಂದ ಶಾಲೆಗಳು ಆರಂಭವಾಗಿವೆ. ಮುಂದಿನ ವಾರದಿಂದ ಪ್ರಾಥಮಿಕ ಶಾಲೆಗಳನ್ನು ಕೂಡ ಆರಂಭಿಸಲು ಚಿಂತನೆ ನಡೆದಿದೆ. ಇದೇ ಹೊತ್ತಲ್ಲಿ ಕೊರೋನಾ ಮೂರನೇ ಅಲೆ ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಕೋರೋನಾ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರಚಿಸಿದ್ದ ತಜ್ಞರ ಸಮಿತಿಯಿಂದ ಈ ಕುರಿತಾಗಿ ಪ್ರಧಾನಮಂತ್ರಿ ಕಚೇರಿಗೆ ವರದಿ ಸಲ್ಲಿಸಲಾಗಿದೆ.
ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗಬಹುದು. ಒಂದು ವೇಳೆ ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾದರೆ, ವೈದ್ಯರು, ವೆಂಟಿಲೇಟರ್, ಅಂಬುಲೆನ್ಸ್ ಮೊದಲಾದ ವೈದ್ಯಕೀಯ ಸೌಲಭ್ಯಗಳ ಕೊರತೆಯಾಗುವ ಸಾಧ್ಯತೆ ಇದ್ದು, ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.
ದೇಶದಲ್ಲಿ ಕೊರೋನಾ ಲಸಿಕೆ ನೀಡುವ ಅಭಿಯಾನ ಪ್ರಗತಿಯಲ್ಲಿದೆ. ಆದರೆ, ಇದುವರೆಗೆ ಶೇಕಡ 7.6 ರಷ್ಟು ಮಂದಿಗೆ ಮಾತ್ರ ಪೂರ್ಣ ಪ್ರಮಾಣದ ಲಸಿಕೆ ನೀಡಲಾಗಿದೆ. ಲಸಿಕೆ ನೀಡಿಕೆ ಅಭಿಯಾನವನ್ನು ಚುರುಕುಗೊಳಿಸದಿದ್ದರೆ ಮೂರನೇ ಅಲೆಯಲ್ಲಿ ಪ್ರತಿದಿನ 6 ಲಕ್ಷ ಮಂದಿಗೆ ಸೋಂಕು ತಗಲಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಅಕ್ಟೋಬರ್ ನಲ್ಲಿ ಮೂರನೇ ಅಲೆ ತೀವ್ರಗೊಳ್ಳಲಿದೆ. ಪ್ರತಿದಿನ 3.2 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಕೊರೋನಾ ವೈರಸ್ ನ ಹೊಸ ಮತ್ತು ಭಾರಿ ಅಪಾಯಕಾರಿ ಆದಂತಹ ರೂಪಾಂತರ ತಳಿಗಳು ಕಾಣಿಸಿಕೊಂಡು ಸೋಂಕಿನ ಪ್ರಮಾಣ ಭಾರಿ ಹೆಚ್ಚಾಗಬಹುದು ಎಂದು ಹೇಳಲಾಗಿದೆ.