ಪ್ರತಿಷ್ಟಿತ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ 12 ರ ವಿಜೇತರಾಗಿ ಪವನ್ದೀಪ್ ರಾಜನ್ ಹೊರಹೊಮ್ಮಿದ್ದಾರೆ. ತಡರಾತ್ರಿ 12 ಗಂಟೆಗೆ ಸರಿಯಾಗಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಪವನ್ ದೀಪ್ ರಾಜನ್ ಟ್ರೋಫಿ, 25 ಲಕ್ಷ ರೂಪಾಯಿ ನಗದು ಹಾಗೂ ಸ್ವಾಂಕಿ ಬ್ರ್ಯಾಂಡ್ ನ್ಯೂ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಅರುಣಿತಾ ಕಾಂಜಿಲಾಲ್ ಮೊದಲ ರನ್ನರ್ ಅಪ್ ಹಾಗೂ ಸಯಾಲಿ ಕಾಂಬ್ಳೆ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮೋಹ್ದ್ ಡ್ಯಾನಿಶ್, ನಿಹಾಲ್ ತೌರೋ ಹಾಗೂ ಶಣ್ಮುಖಪ್ರಿಯ ಕೂಡ ಫಿನಾಲೆ ಎಪಿಸೋಡ್ನಲ್ಲಿ ಭಾಗಿಯಾಗಿದ್ದರು. ಇಂಡಿಯನ್ ಐಡಲ್ 12 ಅತ್ಯಂತ ದೀರ್ಘ ರಿಯಾಲಿಟಿ ಶೋ ಆಗಿದೆ. ಹಾಗೂ ಫಿನಾಲೆ ಎಪಿಸೋಡ್ ಕೂಡ ಅತಿ ಹೆಚ್ಚು ಕಂತುಗಳನ್ನು ಹೊಂದಿದೆ. ಈ ಗಾಯನ ಸಂಬಂಧಿ ರಿಯಾಲಿಟಿ ಶೋ 8 ತಿಂಗಳುಗಳ ಕಾಲ ನಡೆದಿತ್ತು ಹಾಗೂ ಫಿನಾಲೆ ಎಪಿಸೋಡ್ನ್ನು 12 ಗಂಟೆಗಳ ಕಾಲ ಪ್ರಸಾರ ಮಾಡಲಾಗಿದೆ.
ಉತ್ತರಾಖಂಡ್ ಮೂಲದ ಪವನ್ದೀಪ್ ಮೊದಲ ಎಪಿಸೋಡ್ನಿಂದಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಹಾಗೂ ಕೋ ಸ್ಟಾರ್ಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.
ಫಿನಾಲೆ ಎಪಿಸೋಡ್ನಲ್ಲಿ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ, ಸಿದ್ದಾರ್ಥ್ ಮಲ್ಹೋತ್ರಾ, ದಿ ಗ್ರೇಟ್ ಖಾಲಿ, ಅಲ್ಕಾ ಯಗ್ನಿಕ್, ಮಿಕಾ ಸಿಂಗ್, ಉದಿತ್ ನಾರಾಯಣ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಈ ಕಾರ್ಯಕ್ರಮವನ್ನು ಗಾಯಕ ಹಾಗೂ ನಿರೂಪಕ ಆದಿತ್ಯ ನಾರಾಯಣ್ ನಡೆಸಿಕೊಟ್ಟಿದ್ದರು. ಫಿನಾಲೆ ಎಪಿಸೋಡ್ನಲ್ಲಿ ಭಾರತಿ ಸಿಂಗ್ ಹಾಗೂ ಹರ್ಷ್ ಲಿಂಬಾಚಿಯಾ ಕೂಡ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ರು.
ಇನ್ನು ವಿಜೇತರ ಘೋಷಣೆಯಾದ ಬಳಿಕ ಮಾತನಾಡಿದ ಪವನ್ದೀಪ್, ಇಂಡಿಯನ್ ಐಡಲ್ ವೇದಿಕೆಯಲ್ಲಿ ಗಾಯಕರಿಗೆ ಉತ್ತಮ ಗೌರವ ದೊರಕಿದೆ. ಈ ವೇದಿಕೆಯ ಮೂಲಕ ನಾವು ಅನೇಕ ಹಾಡುಗಳಿಗೆ ದನಿಯಾಗಿದ್ದೇವೆ. ಉತ್ತಮ ನಿರ್ಣಾಯಕರು ಹಾಗೂ ಉತ್ತಮ ಅತಿಥಿಗಳ ಎದುರು ಹಾಡುವ ಭಾಗ್ಯ ನಮಗೆ ದೊರಕಿತ್ತು ಎಂದು ಹೇಳಿದ್ರು.