ಮುಂಬೈ ಮತ್ತು ಹಜರತ್ ನಿಜಾಮುದ್ದೀನ್ (ದೆಹಲಿ) ನಡುವೆ ವಾರದ ನಾಲ್ಕು ದಿನಗಳಲ್ಲಿ ರಾಜಧಾನಿ ವಿಶೇಷ ರೈಲು ಚಲಿಸಲಿದೆ ಎಂದು ಕೇಂದ್ರ ರೈಲ್ವೆ (ಸಿಆರ್) ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ನಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡ ನಂತರ ಮುಂಬೈ – ದೆಹಲಿ ರಾಜಧಾನಿ ರೈಲು ಸ್ಥಗಿತಗೊಂಡಿತ್ತು.
01221 ಸಂಖ್ಯೆಯ ರಾಜಧಾನಿ ಸ್ಪೆಷಲ್ ರೈಲು ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಸಂಚಾರ ನಡೆಸಲಿದೆ. ಡಿಸೆಂಬರ್ 30 ರಿಂದ ಸಂಜೆ 4.10ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಿಂದ ಈ ರೈಲು ಹೊರಡಲಿದೆ. ಮಾರನೇ ದಿನ ಬೆಳಗ್ಗೆ 11 ಗಂಟೆಗೆ ರೈಲು ಹಜರತ್ ನಿಜಾಮುದ್ದೀನ್ ತಲುಪಲಿದೆ.
01222 ಸಂಖ್ಯೆಯ ರಾಜಧಾನಿ ಸ್ಪೆಷಲ್ ರೈಲು ಡಿಸೆಂಬರ್ 31ರಿಂದ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ ಸಂಜೆ 4.55ಕ್ಕೆ ಹಜರತ್ ನಿಜಾಮುದ್ದೀನ್ನಿಂದ ಹೊರಟು ಮಾರನೇ ದಿನ ಬೆಳಗ್ಗೆ 11.50ಕ್ಕೆ ಮುಂಬೈ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸಿ ಪ್ರಥಮ ದರ್ಜೆಯ 1 ಬೋಗಿ, ಎಸಿ 2ನೇ ಶ್ರೇಣಿಯ 5 ಬೋಗಿ, 11 ಎಸಿ -3ನೇ ಶ್ರೇಣಿ ಹಾಗೂ ಒಂದು ಪ್ಯಾಂಟ್ರಿ ಕಾರು ಸೇರಿದಂತೆ 19 ಕೋಚ್ ಹೊಂದಿರುವ ರೈಲು ಕಲ್ಯಾಣ್, ನಾಸಿಕ್ ರಸ್ತೆ, ಜಲ್ಗಾಂವ್, ಭೂಪಾಲ್, ಝಾನ್ಸಿ ಹಾಗೂ ಆಗ್ರಾಗಳಲ್ಲಿ ನಿಲ್ಲಲಿದೆ.
01221 ರಾಜಧಾನಿ ವಿಶೇಷ ರೈಲಿನ ಬುಕ್ಕಿಂಗ್ ಡಿಸೆಂಬರ್ 25ರಿಂದ ಆರಂಭವಾಗಲಿದೆ. ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರು ಮಾತ್ರ ಈ ವಿಶೇಷ ರೈಲಿನಲ್ಲಿ ಸಂಚಾರ ಮಾಡಲು ಅರ್ಹತೆ ಪಡೆದಿರುತ್ತಾರೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.