ಕ್ಯಾಲಿಫೋರ್ನಿಯಾ: ಶಾಂತ ಸಮುದ್ರದ ನೀರಿನಿಂದ ಇದ್ದಕ್ಕಿದ್ದಂತೆ ಹೊರ ಬಂದ ಬೃಹತ್ ತಿಮಿಂಗಿಲವೊಂದು ದೋಣಿ ಸಮೇತ ಅದರಲ್ಲಿದ್ದ ಕಯಾಕರ್ ನುಂಗಲೆತ್ನಿಸಿದ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದ ಅವಿಲಾ ಬೀಚ್‌ನಲ್ಲಿ ನವೆಂಬರ್ 2 ರಂದು ನಡೆದಿದೆ.
ಜ್ಯೂಲಿ ಮೆಕ್‌ಸೊರ್ಲೆ ಮತ್ತು ಲಿಜ್ ಕೊಟ್ರೆಲ್ ಸಾವನ್ನು ಅತಿ ಹತ್ತಿರದಿಂದ ಕಂಡ ಕಯಾಕರ್ ಗಳು. ಅಚ್ಚರಿ ಹಾಗೂ ಅದೃಷ್ಟ ಎಂದರೆ, ಅವರಿಬ್ಬರಿಗೂ ಯಾವ ಸಣ್ಣ ಗಾಯಗಳೂ ಆಗಿಲ್ಲ. ಅವರ ಕಾರ್ ಕೀ ಮಾತ್ರ ನಾಪತ್ತೆಯಾಗಿದೆಯಷ್ಟೆ. ಇಬ್ಬರು ಸ್ನೇಹಿತೆಯರು ಶಾಂತ ಸಮುದ್ರದಲ್ಲಿ ಕಯಾಕ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೇಲೆ ಎರಗಿದ ಉಬ್ಬು ಬೆನ್ನಿನ (ಹಂಪ್ ಬ್ಯಾಕ್) ತಿಮಿಂಗಿಲ ತನ್ನ ದೊಡ್ಡ ಬಾಯಿ ತೆರೆದು ಕಯಾಕ್ ದೋಣಿ ಹಾಗೂ ಅದರಲ್ಲಿದ್ದ ಲಿಜ್ ಅವರನ್ನು ನುಂಗಲೆತ್ನಿಸಿದೆ. ಆದರೆ, ಲಿಜ್ ಕಯಾಕ್‌ನಿಂದ ತಪ್ಪಿ ನೀರಿಗೆ ಬಿದ್ದಿದ್ದಾರೆ. ಜ್ಯೂಲಿ ಕೂಡ ಪಕ್ಕದಲ್ಲೇ ಇರುತ್ತಾರೆ. ಈ ಭಯಾನಕ ದೃಶ್ಯವನ್ನು ಸಮೀಪದಲ್ಲೇ ಇನ್ನೊಂದು ದೋಣಿಯಲ್ಲಿದ್ದ ವ್ಯಕ್ತಿ ಸೆರೆ ಹಿಡಿದಿದ್ದು, ಟಿಕ್‌ಟಾಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಸುತ್ತಲಿದ್ದ ಜನ ನೀರಿಗೆ ಬಿದ್ದ ಲಿಜ್‌ರನ್ನು ರಕ್ಷಿಸಿದ್ದಾರೆ. ‘ತಿಮಿಂಗಿಲ ನುಂಗುತ್ತಿದ್ದಂತೆ ನಾನು ಸತ್ತೆ ಎಂದುಕೊಂಡೆ. ಆದರೆ, ಅದರ ಬಾಯಿಗೆ ನನ್ನ ಶರ್ಟ್ ಸಿಕ್ಕಿಕೊಂಡಿತು. ನಾನು ನೀರಿಗೆ ಬಿದ್ದೆ. ಶರ್ಟ್‌ಗೆ ಸಾಕಷ್ಟು ಮೀನುಗಳು ಬಂದು ಮುತ್ತಿಕೊಂಡವು’ ಎಂದು ಸಾವಿನಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿ ಬಂದ ಲಿಜ್ ತಮ್ಮ ಅನುಭವವನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.