ಕಾವೇರಿಯು ಭಾರತದ 7 ಪುಣ್ಯ ತೀರ್ಥಗಳಲ್ಲಿ ಒಂದು. ಇದನ್ನು ದಕ್ಷಿಣ ಗಂಗಾ ಎಂದೂ ಕರೆಯುತ್ತಾರೆ. ಕಾವೇರಿ ನದಿಯ ಮೂಲ ತಲಕಾವೇರಿ. ತಲಕಾವೇರಿಯು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ. ಬ್ರಹ್ಮಗಿರಿ ಬೆಟ್ಟ ಪಶ್ಚಿಮ ಘಟ್ಟದ ಒಂದು ಭಾಗವಾಗಿದ್ದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ.
ಭಾಗಮಂಡಲ ತಲಕಾವೇರಿಯಿಂದ ವಾಹನ ದಾರಿಯಲ್ಲಿ 8 ಕಿ. ಮೀ. ದೂರದಲ್ಲಿರುವ ಹಾಗೂ ಕಾಲ್ದಾರಿಯಲ್ಲಿ ಕೇವಲ 5 ಕಿ. ಮೀ. ದೂರದಲ್ಲಿರುವ ಈ ತಾಣವನ್ನು ಹಿಂದಿನ ಕಾಲದಲ್ಲಿ ಭಗಂಡ ಕ್ಷೇತ್ರ ಎಂದು ಕರೆಯುತ್ತಿದ್ದರು. ಇಲ್ಲಿ ಈಗ ಶ್ರೀ ಭಗಂಡೇಶ್ವರ ದೇವಾಲಯವಿದೆ. ಶ್ರೀ ಭಗಂಡ ಮಹರ್ಷಿಗಳು ತಮ್ಮ ಶಿಷ್ಯರೊಂದಿಗೆ ಇಲ್ಲಿಯೇ ಆಶ್ರಮದಲ್ಲಿ ವಾಸವಾಗಿದ್ದರು.
ಭಾಗಮಂಡಲ ಕ್ಷೇತ್ರಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧವಾಗಿರುತ್ತದೆ. ಇಲ್ಲಿ ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾವಿಷ್ಣು ದೇಗುಲಗಳಿವೆ. ಶ್ರೀ ಮಹಾಗಣಪತಿ ಸನ್ನಿಧಿಯು ದೇಗುಲದ ಹೊರ ಅಂಗಣದಲ್ಲಿದೆ. ಕೊನೆಗೆ ಕೊಡಗನ್ನು ಆಳಿದ ಶ್ರೀಮತ್ ದೊಡ್ಡವೀರರಾಜೇಂದ್ರ ಒಡೆಯರ ಕಾಲದಲ್ಲಿ ಮತ್ತಷ್ಟು ಅಂದವಾದ ಶಿಲ್ಪಕಲಾಪೂರ್ಣವಾದ ದೇವಸ್ಥಾನ ರೂಪಗೊಂಡಿತು.