ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಸೈನಿಕರು ಸಂಘರ್ಷ ನಡೆಸಿದ್ದು, ಇದರಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು, ಇದರ ಮಧ್ಯೆಯೂ ಭಾರತ ಹಾಗೂ ಚೀನಾ ನಡುವೆ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿತ್ತು.
ಈ ಎಲ್ಲ ಬೆಳವಣಿಗೆಳ ನಡುವೆ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಪರಿಸ್ಥಿತಿಯನ್ನು ಅವಲೋಕಿಸಲು ಖುದ್ದು ಲೇಹ್ ಲಡಾಕ್ ಗೆ ಭೇಟಿ ನೀಡಿದ್ದು, ಅವರಿಗೆ ರಕ್ಷಣಾ ಇಲಾಖೆಯ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಎಂ.ಎಂ. ನರವಾನೆ ಸಾಥ್ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಅನಿರೀಕ್ಷಿತವಾಗಿದ್ದು, ಯಾವುದೇ ಮುನ್ಸೂಚನೆ ಇರಲಿಲ್ಲ. ತಮ್ಮ ಭೇಟಿ ಸಂದರ್ಭದಲ್ಲಿ ಸೇನಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿರುವ ಪ್ರಧಾನಿ, ಬಳಿಕ ಭಾರತೀಯ ಯೋಧರನ್ನು ಭೇಟಿಯಾಗಲಿದ್ದಾರೆ.