ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಕರೋನಾ ವೈರಸ್ ಕಾರಣಕ್ಕೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನಿಶ್ಚಿತತೆಯಲ್ಲಿದ್ದ ನೀಟ್ ಹಾಗೂ ಜೆಇಇ ಪರೀಕ್ಷೆಗಳಿಗೆ ದಿನಾಂಕ ಪ್ರಕಟಿಸಲಾಗಿದೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆ ಜುಲೈ 26ರಂದು ನಿಗದಿಯಾಗಿದ್ದು, ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಮುಖ್ಯ ಪರೀಕ್ಷೆ ಜುಲೈ 18ರಿಂದ 23ರವರೆಗೆ ನಡೆಯಲಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಆಗಸ್ಟ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಈ ಬಾರಿ ನೀಟ್ ಪರೀಕ್ಷೆಗೆ 15 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಜೆಇಇ ಮೆನ್ಸ್ ಪರೀಕ್ಷೆಗೆ 9 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದೀಗ ಪರೀಕ್ಷೆಗೆ ದಿನಾಂಕ ಘೋಷಿಸಿರುವುದರಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.