ನವದೆಹಲಿ: ಕಚ್ಚಾತೈಲದ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯಕ್ಕಿಂತಲೂ ಕಡಿಮೆಯಾಗಿದೆ. ಅಮೆರಿಕದ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಶೂನ್ಯಕ್ಕಿಂತಲೂ ಕಡಿಮೆ ಮಟ್ಟಕ್ಕೆ ತೈಲ ಬೆಲೆ ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯ ಪರಿಣಾಮ ದೇಶದ ಮಾರುಕಟ್ಟೆ ಮೇಲೆಯೂ ಉಂಟಾಗಲಿದೆ. ಕಚ್ಚಾ ತೈಲದ ಬೆಲೆಯನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತದೆ. ತೈಲ ಕಂಪನಿಗಳಿಗೆ ನೀಡುವ ಸಬ್ಸಿಡಿಗಳಿಂದ ಉಂಟಾಗುವ ಹಣದ ಕೊರತೆಯನ್ನು ನೀಗಿಸಲು ತೈಲದಿಂದ ಬರುವ ಆದಾಯ ಬಳಸಿಕೊಳ್ಳಲಾಗುತ್ತದೆ. ತೈಲದ ಬೆಲೆಯ ಮೇಲೆ ಹಲವು ತೆರಿಗೆಗಳನ್ನು ಹಾಕುವುದರಿಂದ ರಿಟೇಲ್ ಮಾರಾಟದ ಬೆಲೆ ಗ್ರಾಹಕರಿಗೆ ತಲುಪುವ ವೇಳೆಗೆ ಜಾಸ್ತಿಯಾಗಿರುತ್ತದೆ.
ಸಂಸ್ಕರಿಸಿದ ಪೆಟ್ರೋಲ್ ಮತ್ತು ಡೀಸೆಲ್ ಗೆ ಬೇಡಿಕೆಯಿದೆ. ತೈಲ ಸಂಸ್ಕರಣೆ, ಸಾಗಾಣಿಕೆ, ವಿತರಣೆ, ತೆರಿಗೆ ಒಳಗೊಂಡಂತೆ ಮಾರಾಟ ದರ ನಿಗದಿಯಾಗುವುದರಿಂದ ಮತ್ತು ಸದ್ಯ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿತವಾಗಿರುವ ಕಾರಣ ಪೆಟ್ರೋಲ್ ಡೀಸೆಲ್ ಬೆಲೆ ಏರಿಳಿತವಾಗಬಹುದು. ಭಾರತದಲ್ಲಿ ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿನ ವ್ಯತ್ಯಾಸವೇನೂ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಪ್ರಸ್ತುತ ಕೊರೋನಾ ಆರ್ಥಿಕ ಬಿಕ್ಕಟ್ಟಿನಿಂದ ಹೆಚ್ಚುವರಿ ಖರ್ಚಿನ ಅಗತ್ಯಗಳನ್ನು ಪೂರೈಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ಲೀಟರ್ ಗೆ 3 -5 ರೂಪಾಯಿಯಷ್ಟು ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಮಾರ್ಚ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕ ಏರಿಕೆ ಮಾಡಲಾಗಿದ್ದು, ಈಗ ಮತ್ತೊಂದು ಸಲ ಸುಂಕ ಏರಿಕೆ ಮಾಡಿ ಆರ್ಥಿಕ ಚಟುವಟಿಕೆ ಪುನರುಜ್ಜೀವನ ನೀಡಲು ಯೋಜಿಸಿದೆ ಎಂದು ಹೇಳಲಾಗಿದೆ.