ಹಲ್ಲು ನೋವು ಅಥವಾ ಒಸಡಿನ ಸಮಸ್ಯೆ ಎದುರಾದಾಗ ಅನೇಕರು ಅದನ್ನು ಕೇವಲ ಬಾಯಿಯ ಆರೋಗ್ಯಕ್ಕೆ ಮಾತ್ರ ಸೀಮಿತ ಎಂದು ನಿರ್ಲಕ್ಷಿಸುತ್ತಾರೆ. ಆದರೆ, ಹಲ್ಲಿನ ಸೋಂಕು ಕೇವಲ ಬಾಯಿಗೆ ಮಾತ್ರವಲ್ಲದೆ ಕಣ್ಣಿನ ದೃಷ್ಟಿಗೂ ಕಂಟಕ ತರಬಹುದು ಎಂಬ ಆಘಾತಕಾರಿ ವಿಷಯ ಸಂಶೋಧನೆಗಳಿಂದ ತಿಳಿದುಬಂದಿದೆ. ಹಲ್ಲಿನ ಸಮಸ್ಯೆಗೂ ಕಣ್ಣಿನ ಆರೋಗ್ಯಕ್ಕೂ ನೇರ ಸಂಬಂಧವಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ನಮ್ಮ ಮುಖದ ನರಗಳು ಮತ್ತು ರಕ್ತನಾಳಗಳು ಒಂದಕ್ಕೊಂದು ನಿಕಟ ಸಂಪರ್ಕ ಹೊಂದಿವೆ. ವಿಶೇಷವಾಗಿ ಮೇಲಿನ ದವಡೆಯ ಹಲ್ಲುಗಳ ಬೇರುಗಳು ಕಣ್ಣಿನ ಕೆಳಭಾಗಕ್ಕೆ ಅತ್ಯಂತ ಹತ್ತಿರದಲ್ಲಿರುತ್ತವೆ. ಹಲ್ಲಿನಲ್ಲಿ ತೀವ್ರ ನಿಗಾ ವಹಿಸದಿದ್ದರೆ ಅಥವಾ ಸೋಂಕು ಉಂಟಾದರೆ, ಆ ಬ್ಯಾಕ್ಟೀರಿಯಾಗಳು ರಕ್ತನಾಳಗಳ ಮೂಲಕ ಕಣ್ಣಿನ ನರಗಳಿಗೆ ಹರಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಕಣ್ಣು ಮಂಜಾಗುವುದು, ಕಣ್ಣಿನಲ್ಲಿ ನೋವು, ಊತ ಅಥವಾ ದೃಷ್ಟಿ ದೋಷದಂತಹ ಗಂಭೀರ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು.
ಒಸಡಿನ ಕಾಯಿಲೆಗಳು ಮತ್ತು ಹಲ್ಲಿನ ಸೋಂಕು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಇಡೀ ದೇಹದ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹಲ್ಲಿನ ಬೇರುಗಳಲ್ಲಿ ಹರಡುವ ಕೀವು ಅಥವಾ ಸೋಂಕು ತಲೆಯ ಭಾಗಕ್ಕೆ ಹರಡಿ, ಮೆದುಳು ಮತ್ತು ಕಣ್ಣಿನ ಸಂಪರ್ಕ ಕಡಿತಗೊಳಿಸುವ ಅಪಾಯವೂ ಇರುತ್ತದೆ. ಆದ್ದರಿಂದ, ಹಲ್ಲಿನ ಯಾವುದೇ ಸಣ್ಣ ಸಮಸ್ಯೆಯನ್ನು ಕಡೆಗಣಿಸದೆ ತಕ್ಷಣವೇ ದಂತ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.
ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕೇವಲ ಹಲ್ಲುಗಳ ಆರೋಗ್ಯಕ್ಕೆ ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯ ಹಾಗೂ ಕಣ್ಣಿನ ರಕ್ಷಣೆಗೂ ಅತ್ಯಗತ್ಯವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

