ಗಿಜಾ: ಐದು ವರ್ಷದ ಬಾಲಕನೊಬ್ಬ ಕಟ್ಟಡದ ಬಾಲ್ಕನಿಯಿಂದ ಕೆಳಗೆ ಬಿದ್ದಾಗ ಅಂಗಡಿ ಮಾಲೀಕರೊಬ್ಬರು ಕ್ಷಣಾರ್ಧದಲ್ಲಿ ಓಡಿ ಬಂದು ಬಾಲಕನನ್ನು ಹಿಡಿದು ರಕ್ಷಿಸಿರುವ ಘಟನೆ ಈಜಿಪ್ಟ್‌ನ ಗಿಜಾದಲ್ಲಿ ನಡೆದಿದೆ. ರಕ್ಷಣೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 29ರಂದು ಗಿಜಾದ ಅರ್ಡ್ ಎಲ್-ಲಿವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ಜನರು ಓಡಾಡುತ್ತಿದ್ದ ವೇಳೆ ಏಕಾಏಕಿ ಕಟ್ಟಡದ ಮೇಲಿನಿಂದ ಬಾಲಕ ಕೆಳಗೆ ಬೀಳುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸುತ್ತದೆ.
https://x.com/Rainmaker1973/status/2106762930213536194
ಕ್ಷಣಾರ್ಧದಲ್ಲಿ ಓಡಿ ಬಂದು ಬಾಲಕನನ್ನು ಹಿಡಿದ
ಅಹ್ಮದ್ ರಗಬ್ ಎಂಬ ಅಂಗಡಿ ಮಾಲೀಕ ತನ್ನ ಅಂಗಡಿಯ ಸಮೀಪದಲ್ಲಿದ್ದಾಗ ಕೂಗಾಟ ಮತ್ತು ಅಳುವಿನ ಸದ್ದು ಕೇಳಿದೆ. ತಕ್ಷಣ ಕಟ್ಟಡದತ್ತ ನೋಡಿದಾಗ ಬಾಲಕ ಅಪಾಯದಲ್ಲಿರುವುದು ಅವರಿಗೆ ಗೊತ್ತಾಗಿದೆ.
ಕೆಲವೇ ಕ್ಷಣಗಳಲ್ಲಿ ಬಾಲಕ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ರಗಬ್ ತಕ್ಷಣ ಬಾಲಕ ಬೀಳುತ್ತಿದ್ದ ಸ್ಥಳದತ್ತ ಓಡಿ ಹೋಗಿ, ಆತನ ಕೆಳಗೆ ನಿಂತಿದ್ದಾರೆ. ಬಾಲಕ ನೆಲಕ್ಕೆ ಅಪ್ಪಳಿಸುವ ಮುನ್ನವೇ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ ಕಿರಿದಾಗಿದ್ದು, ಸುತ್ತಮುತ್ತಲೂ ಜನರು ಮತ್ತು ಕಟ್ಟಡಗಳಿದ್ದ ಕಾರಣ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿತ್ತು. ಇಂತಹ ಸಂದರ್ಭದಲ್ಲಿ ರಗಬ್ ತಕ್ಷಣ ತೆಗೆದುಕೊಂಡ ನಿರ್ಧಾರ ಬಾಲಕನ ಜೀವ ಉಳಿಸಲು ಕಾರಣವಾಗಿದೆ.
‘ಯೋಚಿಸಲು ಸಮಯವೇ ಇರಲಿಲ್ಲ’
ಘಟನೆ ಕುರಿತು ಮಾತನಾಡಿರುವ ರಗಬ್, ತಾವು ಹೊರಗೆ ಯಾವುದೋ ವಸ್ತು ಖರೀದಿಸಲು ಹೋಗಿದ್ದಾಗ ಕೂಗಾಟ ಕೇಳಿಸಿತು ಎಂದು ಹೇಳಿದ್ದಾರೆ. ಎಲ್ಲವೂ ಕೆಲವೇ ಸೆಕೆಂಡ್‌ಗಳಲ್ಲಿ ನಡೆದಿದ್ದರಿಂದ ಬಾಲಕನನ್ನು ತಾನು ಹಿಡಿಯಲು ಸಾಧ್ಯವೇ ಎಂಬ ಬಗ್ಗೆ ಯೋಚಿಸಲು ಕೂಡ ಸಮಯ ಸಿಗಲಿಲ್ಲ ಎಂದಿದ್ದಾರೆ.
ಬಾಲಕ ಕೆಳಗೆ ಬೀಳುತ್ತಿರುವುದನ್ನು ನೋಡಿದ ತಕ್ಷಣ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಓಡಿದೆ. ಬಾಲಕನನ್ನು ಹಿಡಿದ ಬಳಿಕವೇ ಘಟನೆ ಎಷ್ಟು ಅಪಾಯಕಾರಿಯಾಗಿತ್ತು ಎಂಬುದು ಅರಿವಾಯಿತು ಎಂದು ಅವರು ತಿಳಿಸಿದ್ದಾರೆ.
ಬಾಲಕ ಸುರಕ್ಷಿತವಾದ ಬಳಿಕ ನಡುಗಿದ ರಗಬ್
ಬಾಲಕನನ್ನು ರಕ್ಷಿಸಿದ ಬಳಿಕದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಗಬ್ ಬಾಲಕನನ್ನು ಹಿಡಿದುಕೊಂಡು ಬಾಲ್ಕನಿಯತ್ತ ನೋಡುತ್ತಾರೆ. ಬಳಿಕ ಬಾಲಕನೊಂದಿಗೆ ಅಲ್ಲಿಂದ ತೆರಳುವ ಅವರು, ಸಮೀಪದಲ್ಲಿದ್ದ ಹಾಸಿಗೆಯೊಂದರ ಮೇಲೆ ಕುಳಿತುಕೊಂಡು ಕೆಲಕಾಲ ವಿಶ್ರಾಂತಿ ಪಡೆಯುತ್ತಿರುವುದು ಕಾಣಿಸುತ್ತದೆ.
ಘಟನೆ ನಡೆದ ಕ್ಷಣದಲ್ಲಿ ತಾನು ಹೇಗೆ ಅಷ್ಟು ವೇಗವಾಗಿ ಓಡಿ ಬಾಲಕನನ್ನು ಹಿಡಿಯಲು ಸಾಧ್ಯವಾಯಿತು ಎಂಬುದೇ ಅರ್ಥವಾಗುತ್ತಿಲ್ಲ ಎಂದು ರಗಬ್ ಹೇಳಿದ್ದಾರೆ. ಇದೇ ಪರಿಸ್ಥಿತಿ ಮತ್ತೆ 100 ಬಾರಿ ಎದುರಾದರೂ ಅದೇ ರೀತಿಯಲ್ಲಿ ಬಾಲಕನನ್ನು ಹಿಡಿಯಲು ಸಾಧ್ಯವಾಗುತ್ತದೆಯೇ ಎಂಬುದು ಖಚಿತವಿಲ್ಲ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಬಾಲಕನನ್ನು ರಕ್ಷಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಬಾಲಕ ಕೆಳಗೆ ಬೀಳುವುದನ್ನು ಗಮನಿಸಿದ ರಗಬ್ ಕ್ಷಣವೂ ತಡ ಮಾಡದೆ ಓಡಿ ಬಂದು ಆತನನ್ನು ಹಿಡಿದಿರುವ ದೃಶ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪಾಯದ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬರು ತಕ್ಷಣ ಸ್ಪಂದಿಸಿ ಬಾಲಕನ ಜೀವ ಉಳಿಸಿದ ಘಟನೆ ಇದಾಗಿದೆ.

