ಅಕ್ಟೋಬರ್ 12 ರಂದು ಮುಂಬೈನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ, ಕಿಯಾ ಟೆನಿಸ್ ಪ್ರೀಮಿಯರ್ ಲೀಗ್ (TPL) ತನ್ನ 8ನೇ ಆವೃತ್ತಿಯ ಮಾರ್ಕಿ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ, ಅರ್ಜೆಂಟೀನಾದ ರೋಮನ್ ಬೊರುಚಾಗಾ ಹಾಗೂ ಆಸ್ಟ್ರೇಲಿಯಾದ ರಿಂಕಿ ಹಿಜಿಕಾತಾ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖ ಆಟಗಾರರು ಲೀಗ್‌ನ 8 ಫ್ರಾಂಚೈಸಿಗಳನ್ನು ಪ್ರತಿನಿಧಿಸಲಿದ್ದಾರೆ.
ಮುಂಬೈ ರಾಯಲ್ಸ್, ರಾಜಸ್ಥಾನ್ ರೇಂಜರ್ಸ್, ಗುರಗಾಂವ್ ಗ್ರಾಂಡ್ ಸ್ಲಾಮರ್ಸ್, ಕೋಲ್ಕತ್ತಾ ಥಂಡರ್ ಬ್ಲೇಡ್ಸ್, ಲಕ್ನೋ ಬ್ಲೇಜರ್ಸ್, ಹೈದರಾಬಾದ್ ಸ್ಟ್ರೈಕರ್ಸ್, ಗುಜರಾತ್ ಪ್ಯಾಂಥರ್ಸ್ ಹಾಗೂ ಜಿಎಸ್ ದೆಹಲಿ ಏಸಸ್ ತಂಡಗಳು ಈ ಮಾರ್ಕಿ ಆಟಗಾರರ ಸುತ್ತ ತಮ್ಮ ತಂಡವನ್ನು ರೂಪಿಸಿಕೊಳ್ಳಲಿವೆ.
ಪ್ರಮುಖ ಆಟಗಾರರು ಮತ್ತು ತಂಡಗಳ ವಿವರ:
ಗುರಗಾಂವ್ ಗ್ರಾಂಡ್ ಸ್ಲಾಮರ್ಸ್ ತಂಡವನ್ನು ಭಾರತದ 46 ವರ್ಷದ ಹಿರಿಯ ಆಟಗಾರ ರೋಹನ್ ಬೋಪಣ್ಣ ಮುನ್ನಡೆಸಲಿದ್ದಾರೆ. ಮಾಜಿ ವಿಶ್ವ ನಂ. 1 ಡಬಲ್ಸ್ ಆಟಗಾರ ಹಾಗೂ ಎರಡು ಬಾರಿಯ ಗ್ರಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಬೋಪಣ್ಣ, ತಮ್ಮ ಅನುಭವದಿಂದ ತಂಡಕ್ಕೆ ದೊಡ್ಡ ಬಲ ತಂದುಕೊಡಲಿದ್ದಾರೆ. ಕೋಲ್ಕತ್ತಾ ಥಂಡರ್ ಬ್ಲೇಡ್ಸ್ ಪರ ವಿಶ್ವ ನಂ. 60 ಶ್ರೇಯಾಂಕದ ಅರ್ಜೆಂಟೀನಾದ ರೋಮನ್ ಬೊರುಚಾಗಾ ಕಣಕ್ಕಿಳಿಯಲಿದ್ದರೆ, ರಾಜಸ್ಥಾನ್ ರೇಂಜರ್ಸ್ ಪರ 2023ರ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಚಾಂಪಿಯನ್ ಆಸ್ಟ್ರೇಲಿಯಾದ ರಿಂಕಿ ಹಿಜಿಕಾತಾ ಪದಾರ್ಪಣೆ ಮಾಡಲಿದ್ದಾರೆ.
ಇನ್ನು ಮುಂಬೈ ರಾಯಲ್ಸ್ ಪರ ಫ್ರಾನ್ಸ್‌ನ ಟೆರೆನ್ಸ್ ಅಟ್ಮಾನೆ, ಲಕ್ನೋ ಬ್ಲೇಜರ್ಸ್ ಪರ ಚೆಕ್ ಗಣರಾಜ್ಯದ ಡಾಲಿಬೋರ್ ಸ್ವರ್ಸಿನಾ, ಹೈದರಾಬಾದ್ ಸ್ಟ್ರೈಕರ್ಸ್ ಪರ ಕ್ರೊಯೇಷಿಯಾದ ಡಿನೋ ಪ್ರಿಜ್ಮಿಕ್, ಹಾಲಿ ಚಾಂಪಿಯನ್ ಜಿಎಸ್ ದೆಹಲಿ ಏಸಸ್ ಪರ ಆಸ್ಟ್ರೇಲಿಯಾದ ಆಡಮ್ ವಾಲ್ಟನ್ ಹಾಗೂ ಗುಜರಾತ್ ಪ್ಯಾಂಥರ್ಸ್ ಪರ ಫ್ರಾನ್ಸ್‌ನ ಅಲೆಕ್ಸಾಂಡ್ರೆ ಮುಲ್ಲರ್ ಮಾರ್ಕಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಟೂರ್ನಿ ಎಂದು ಮತ್ತು ಎಲ್ಲಿ?:
ಕಿಯಾ ಟೆನಿಸ್ ಪ್ರೀಮಿಯರ್ ಲೀಗ್ 8ನೇ ಆವೃತ್ತಿಯ ಪಂದ್ಯಗಳು ಡಿಸೆಂಬರ್ 8 ರಿಂದ 13 ರವರೆಗೆ ಹೈದರಾಬಾದ್‌ನ ಎಲ್‌ಬಿ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿವೆ. ದಿನಂಪ್ರತಿ ಸಂಜೆ 4:30 ರಿಂದ ಪಂದ್ಯಗಳು ಆರಂಭವಾಗಲಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. ಪ್ರತಿ ಪಂದ್ಯವೂ 25 ಪಾಯಿಂಟ್‌ಗಳ ವೇಗದ ಮಾದರಿಯಲ್ಲಿ ನಡೆಯಲಿದ್ದು, ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೂ ಮಿಕ್ಸ್‌ಡ್ ಡಬಲ್ಸ್ ವಿಭಾಗಗಳನ್ನು ಒಳಗೊಂಡಿರಲಿದೆ.

