ಖ್ಯಾತ ಪರಿಸರ ತಜ್ಞ, ಪಶ್ಚಿಮ ಘಟ್ಟಗಳ ಧ್ವನಿ ಎಂದೇ ಖ್ಯಾತರಾಗಿದ್ದ ಮಾಧವ ಗಾಡ್ಗೀಳ್ ನಿಧನ ವಿಧಿವಶರಾದರು. ಈ ಕುರಿತು ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
84 ವರ್ಷದ ಮಾಧವ ಗಾಡ್ಗೀಳ್ ಪುಣೆಯಲ್ಲಿ ನಿಧನ ಹೊಂದಿದ್ದಾರೆ. ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬುಧವಾರ ತಡರಾತ್ರಿ ಅವರು ನಿಧನ ಹೊಂದಿದ್ದು, ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಮಾಧವ ಗಾಡ್ಗೀಳ್ ಪುತ್ರ ಸಿದ್ಧಾರ್ಥ ಗಾಡ್ಗೀಳ್, “ನಾನು ದುಖಃದ ವಾರ್ತೆಯೊಂದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ತಂದೆ ಮಾಧವ ಗಾಡ್ಗೀಳ್ ಪುಣೆಯಲ್ಲಿ ಬುಧವಾರ ತಡರಾತ್ರಿ ಕೊನೆಯುಸಿರೆಳೆದರು” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಪಶ್ಚಿಮ ಘಟ್ಟಗಳ ಧ್ವನಿ: ಮಾಧವ ಗಾಡ್ಗೀಳ್ ಅವರನ್ನು ಪಶ್ಚಿಮ ಘಟ್ಟಗಳ ಧ್ವನಿ ಎಂದೇ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅವರು ಗಾಡ್ಗೀಳ್ ವರದಿಯನ್ನು ತಯಾರು ಮಾಡಿದ್ದರು. ಆಧುನಿಕ ಭಾರತೀಯ ಪರಿಸರ ವಿಜ್ಞಾನದ ಪಿತಾಮಹ ಎಂದು ಗಾಡ್ಗೀಳ್ ಅವರನ್ನು ಕರೆಯುತ್ತಾರೆ. ದೇಶದ ಪ್ರಮುಖ ಪರಿಸರ ಚಿಂತಕರಲ್ಲಿ ಅವರು ಒಬ್ಬರಾಗಿದ್ದರು.
ಐದು ದಶಕಕ್ಕೂ ಹೆಚ್ಚು ಕಾಲ ಮಾಧವ ಗಾಡ್ಗೀಳ್ ಅವರು ಭಾರತದ ಪರಿಸರ ಚಿಂತನೆ ಮತ್ತು ಸಂರಕ್ಷಣೆಯಲ್ಲಿ ತೊಡಗಿದ್ದರು. 2010ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯವು ರಚಿಸಿದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ ಅಧ್ಯಕ್ಷತೆ ವಹಿಸಿದ್ದಕ್ಕಾಗಿ ಗಾಡ್ಗೀಳ್ ಅವರು ಹೆಚ್ಚು ಪ್ರಸಿದ್ಧರಾಗಿದ್ದರು ಅವರು ನೀಡಿದ ವರದಿ ಗಾಡ್ಗೀಳ್ ವರದಿ ಎಂದೇ ಜನಪ್ರಿಯವಾಗಿದೆ.
ಈ ಸಮಿತಿಯ 2011ರ ವರದಿಯು ಅನಿಯಂತ್ರಿತ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಬೃಹತ್ ಅಣೆಕಟ್ಟುಗಳು ಮತ್ತು ಮೂಲಸೌಕರ್ಯ ಯೋಜನೆಗಳು ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿ ಪರಿಸರ ವಿಕೋಪಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿತ್ತು. ಈ ವರದಿಯು ಹಲವಾರು ರಾಜ್ಯಗಳು ಮತ್ತು ಅಭಿವೃದ್ಧಿ ಲಾಬಿಗಳಿಂದ ತೀವ್ರ ವಿರೋಧವನ್ನು ಎದುರಿಸಿದರೂ, ನಂತರದ ವರ್ಷಗಳಲ್ಲಿ ಕೇರಳ, ಕೊಡಗು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳ ನಂತರ ವರದಿಯ ಶಿಫಾರಸುಗಳು ಮತ್ತೆ ಚರ್ಚೆಗೆ ಬಂದವು.
ಮಾಧವ ಗಾಡ್ಗೀಳ್ 1942ರಲ್ಲಿ ಪುಣೆಯಲ್ಲಿ ಜನಿಸಿದರು. 1983ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪರಿಸರ ವಿಜ್ಞಾನ ಕೇಂದ್ರದಸಂಸ್ಥಾಪಕರಾಗಿದ್ದರು. ಅವರ ನಾಯಕತ್ವದಲ್ಲಿ ಈ ಕೇಂದ್ರವು ಪರಿಸರ ವಿಜ್ಞಾನ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಪರಿಸರ ನೀತಿಯ ಸಂಶೋಧನೆಯಲ್ಲಿ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿತು.
ಭಾರತದ ಜೈವಿಕ ವೈವಿಧ್ಯತೆ ಕಾಯ್ದೆ (2002)ರ ಪ್ರಮುಖ ವಿನ್ಯಾಸಕರಾಗಿದ್ದ ಗಾಡ್ಗೀಳ್ ಅವರು ಜೈವಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಪರಿಸರ ಜ್ಞಾನವನ್ನು ದಾಖಲಿಸಲು ಮತ್ತು ರಕ್ಷಿಸಲು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಗೆ ಅಧಿಕಾರ ನೀಡುವ ‘ಜನರ ಜೀವವೈವಿಧ್ಯ ದಾಖಲೆಗಳ’ ಪರಿಕಲ್ಪನೆಯನ್ನು ಕೊಟ್ಟರು.
ಮಾಧವ ಗಾಡ್ಗೀಳ್ 7 ಪುಸ್ತಕಗಳನ್ನು ಮತ್ತು 225ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಬರೆದಿದ್ದಾರೆ. ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜಾಗತಿಕ ಪರಿಸರ ಸೌಲಭ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಸಮಿತಿಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಅಧ್ಯಕ್ಷತೆ ವಹಿಸಿದ್ದರು.
ಮಾಧವ ಗಾಡ್ಗೀಳ್ ಅವರು 1981ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ, 2015ರಲ್ಲಿ ಪರಿಸರ ಸಾಧನೆಗಾಗಿ ಟೈಲರ್ ಪ್ರಶಸ್ತಿ ಮತ್ತು ವೋಲ್ವೋ ಪರಿಸರ ಪ್ರಶಸ್ತಿ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳನ್ನು ಪಡೆದಿದ್ದಾರೆ.
ಸಚಿವರ ಸಂತಾಪ: ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಧವ ಗಾಡ್ಗೀಳ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಭಾರತದ ಹೆಸರಾಂತ ಪರಿಸರ ತಜ್ಞರು, ಪರಿಸರ ವಿಜ್ಞಾನ ಕೇಂದ್ರದ ಸಂಸ್ಥಾಪಕರು ಹಾಗೂ ಪಶ್ಚಿಮಘಟ್ಟ ಪರಿಸರ ಅಧ್ಯಯನದ ತಜ್ಞರ ಸಮಿತಿ (ಗಾಡ್ಗೀಳ್ ಆಯೋಗ)ದ ಅಧ್ಯಕ್ಷರಾಗಿದ್ದ ಮಾಧವ ಗಾಡ್ಗೀಳ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು’ ಎಂದು ಹೇಳಿದ್ದಾರೆ.
‘ಪರಿಸರ ಸಂರಕ್ಷಣೆಗೆ ಹಾಗೂ ಜೀವವೈವಿಧ್ಯತೆಯ ವಿಶ್ವದ ಅದ್ಭುತ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದ ಉಳಿವು–ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಗಾಡ್ಗೀಳ್ ಅವರು ತಮ್ಮ 83ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ; ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಮತ್ತು ಶಿಷ್ಯವರ್ಗಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಹಲವು ನದಿಗಳ ಮೂಲಸ್ಥಾನವಾಗಿರುವ, ಆಮ್ಲಜನಕದ ಕಣಜವೆನಿಸಿರುವ ಹಾಗೂ ಮುಂಗಾರು ಮಾರುತಗಳನ್ನು ತಡೆದು ದೇಶವ್ಯಾಪಿ ಮಳೆಯಾಗಲು ಸಹಕಾರಿಯಾಗಿರುವ ಪಶ್ಚಿಮಘಟ್ಟಗಳ ಗಿರಿಪ್ರದೇಶಗಳು ಗಣಿಗಾರಿಕೆ ಹಾಗೂ ಮಾಲಿನ್ಯಕಾರಿ ಕೈಗಾರಿಕೆಗಳಿಂದ ಕ್ರಮೇಣ ನಾಶವಾಗುತ್ತಿರುವ ಕುರಿತು ಗಾಡ್ಗೀಳ್ ಅವರು ಸದಾ ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದರು. ಅವರು ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆಗೆ ಭಾರತಕ್ಕೆ ಮಾರ್ಗದರ್ಶಿ ಸೂತ್ರಗಳಾಗಿವೆ’ ಎಂದು ಸಂತಾಪ ಸೂಚಿಸಿದ್ದಾರೆ.

