ಬೆಂಗಳೂರು: ಬಿಗ್ ಬಾಸ್ ಸೀಜನ್- 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ಸಿನಿಮಾ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ‘ಸರ್ಕಾರಿ ಶಾಲೆ ಹೆಚ್8’ ಸಿನಿಮಾ ನಿರ್ದೇಶಕರು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ಗಿಲ್ಲಿ ನಟ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರಿ ಶಾಲೆ ಹೆಚ್8 ಸಿನಿಮಾದಲ್ಲಿ ಗಿಲ್ಲಿ ನಟ ಅಭಿನಯಿಸಿದ್ದಾರೆ. ಆದರೆ ಅದರ ಪ್ರಚಾರದಲ್ಲಿ ಅವರು ಭಾಗಿಯಾಗಿಲ್ಲ. ಹಾಗಾಗಿ ಗಿಲ್ಲಿ ವಿರುದ್ಧ ಚಿತ್ರತಂಡದವರು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು. ಈ ಬಗ್ಗೆ ಪ್ರತಿಕ್ರ್ಯಿಸಿರುವ ಗಿಲ್ಲಿ, ನನ್ನ ಜಾಗದಲ್ಲಿ ಇದ್ದವರಿಗೆ ಮಾತ್ರ ನನ್ನ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಗಿಲ್ಲಿ ನಟಿಸಿದ್ದ ಸರ್ಕಾರಿ ಶಾಲೆ ಹೆಚ್8 ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ ಸಿನಿಮಾದ ಪ್ರಚಾರಕ್ಕೆ ಗಿಲ್ಲಿ ನಟ ಬಂದಿಲ್ಲ ಎಂದು ಚಿತ್ರತಂಡ ಕರ್ನಾಟಕ ಚಲನಚಿತ್ರರ ವಾಣಿಜ್ಯ ಮಂಡಳಿಗೆ ದೂರು ನೀಡಿತ್ತು. ಈ ನಡುವೆ ಗಿಲ್ಲಿ ನಟ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸೂಪರ್ ಸ್ಟಾರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಗಿಲ್ಲಿ, ಸರ್ಕಾರಿ ಶಾಲೆ ಹೆಚ್8 ಸಿನಿಮಾ ಮಾಡಿ 2ರಿಂದ ಎರಡೂವರೆ ವರ್ಷ ಆಗಿದೆ. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ. ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.
ನನಗೆ ಒಂದಷ್ಟು ಕೆಲಸಗಳ ಒತ್ತಡ ಇತ್ತು. ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಅವರಿಗೆ ಏನೋ ಅನಿಸಿರಬೇಕು. ಅವರದ್ದು ತಪ್ಪು ಎಂದು ನಾನು ಹೇಳಲ್ಲ ಎಂದಿದ್ದಾರೆ.
ದೂರು ನೀಡಿದ ಬಳಿಕ ನಾನು ಸರ್ಕಾರಿ ಶಾಲೆ ಹೆಚ್8 ಚಿತ್ರತಂಡವನ್ನು ಸಂಪರ್ಕಿಸಲಿಲ್ಲ. ಬೇರೆ ಕೆಲಸಗಳಲ್ಲಿ ನಾನು ಒಂದಷ್ಟು ಬ್ಯುಸಿ ಆದೆ. ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

