HomeIndia70ರ ಇಳಿವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಆಯ್ಕೆಯಾದ ವೃದ್ಧ: ಅರ್ಹತೆ ಪಡೆದರೂ ಸಿಗದ ಸೀಟು: ವೈದ್ಯನಾಗುವ...

70ರ ಇಳಿವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಆಯ್ಕೆಯಾದ ವೃದ್ಧ: ಅರ್ಹತೆ ಪಡೆದರೂ ಸಿಗದ ಸೀಟು: ವೈದ್ಯನಾಗುವ ಕನಸು ಛಿದ್ರ

ಲಖನೌ: ಸಾಧಿಸಬೇಕೆಂಬ ಛಲವೊಂದಿದ್ದರೆ ವಯಸ್ಸು ಕೂಡ ಅಡ್ಡಿಯಾಗಲ್ಲ ಎಂಬ ಮಾತಿದೆ. ಇಲ್ಲೋರ್ವ 70 ವರ್ಷದ ವೃದ್ಧರೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ವಯಸ್ಸುನ ಹಂಗಿಲ್ಲದೇ ಪರೀಕ್ಷೆಯಲ್ಲಿಯೂ ಅರ್ಹತೆ ಪಡೆದರೂ ಅವರ ವೈದ್ಯನಾಗಬೇಕೆಂಬ ಕನಸಿಗೆ ವ್ಯವಸ್ಥೆ ಅಡ್ದಿಯಾಗಿದೆ.

70 ವರ್ಷದ ಅಶೋಕ್ ಬಹಾರ್ ಅವರು 2026 ರ ನೀಟ್ ಯುಜಿ (NEET UG) ಪರೀಕ್ಷೆಗೆ ಹಾಜರಾಗಿ ಅರ್ಹತೆ ಕೂಡ ಪಡೆದುಕೊಂಡಿದ್ದಾರೆ. ಅವರ ರ‍್ಯಾಂಕ್ ವಿವರಗಳು ಬಹಿರಂಗವಾಗಿಲ್ಲದಿದ್ದರೂ, ಕಡಿಮೆ ರ‍್ಯಾಂಕ್ ಬಂದ ಕಾರಣಕ್ಕಾಗಿ ಸಾಮಾನ್ಯ ಕೋಟಾದಲ್ಲಿ ಸೀಟು ಸಿಗುವುದು ಕಷ್ಟವಾಯಿತು. ಈ ಹಿನ್ನೆಲೆಯಲ್ಲಿ ಅವರು ಹಿರಿಯ ನಾಗರಿಕರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪೊಂದು 70 ವರ್ಷದ ಅಶೋಕ್ ಬಹಾರ್ ಅವರ ವೈದ್ಯರಾಗುವ ಕನಸನ್ನು ಭಗ್ನಗೊಳಿಸಿದೆ. ಎಂಬಿಬಿಎಸ್ ಸೇರಿದಂತೆ ಇತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಹಿರಿಯ ನಾಗರಿಕರಿಗೆ ಶೇ.1 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ಅಶೋಕ್ ಬಹಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಎಂಬಿಬಿಎಸ್ ಕೋರ್ಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಶೇ.1 ರಷ್ಟು ಮೀಸಲಾತಿ ಕೋರಿ ಅಶೋಕ್ ಬಹಾರ್ ಈ ಹಿಂದೆ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿ ವಜಾಗೊಂಡ ನಂತರ, ಅವರು ವಿಭಾಗೀಯ ಪೀಠದ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಮಂಜೀವ್ ಶುಕ್ಲಾ ಅವರಿದ್ದ ಪೀಠವು ಈ ಮೇಲ್ಮನವಿಯ ವಿಚಾರಣೆ ನಡೆಸಿ, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿಯಿತು. “ಮೀಸಲಾತಿಯ ವಿಷಯವನ್ನು ನ್ಯಾಯಾಲಯಗಳು ನಿರ್ಧರಿಸಲು ಸಾಧ್ಯವಿಲ್ಲ. ಇದು ಶಾಸಕಾಂಗ ಹಾಗೂ ಸಂಬಂಧಪಟ್ಟ ಸರ್ಕಾರದ ಆಡಳಿತಾತ್ಮಕ ನಿರ್ಧಾರಕ್ಕೆ ಒಳಪಟ್ಟಿರುತ್ತದೆ” ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು.

ಉತ್ತರ ಪ್ರದೇಶದ ಅಲಂಬಾಗ್‌ನ ಚಂದರ್‌ನಗರದ ನಿವಾಸಿಯಾಗಿರುವ 70 ವರ್ಷದ ಅಶೋಕ್ ಬಹಾರ್ ಅವರು ಲಕ್ನೋ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಹಾಗೂ ಎಂಬಿಎ ಸ್ನಾತಕೋತ್ತರ ಪದವಿಗಳನ್ನು ಪಡೆದು, ಉನ್ನತ ಶಿಕ್ಷಣತಜ್ಞರಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು 2020 ರಲ್ಲಿ ಸ್ವಯಂಪ್ರೇರಿತ ನಿವೃತ್ತಿ (VRS) ಪಡೆದಿದ್ದರು.

ಇವರ ಪತ್ನಿ ಮಂಜುಲ್ ಬಹಾರ್ ಅವರೂ ಸಹ ವೈದ್ಯೆಯಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದಾರೆ. ನಿವೃತ್ತಿಯ ನಂತರವೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅಪಾರ ಹಂಬಲದಿಂದ 70ನೇ ವಯಸ್ಸಿನಲ್ಲಿ ಅಶೋಕ್ ಬಹಾರ್ ನೀಟ್ (NEET UG) ಪರೀಕ್ಷೆ ಬರೆದು ಅರ್ಹತೆ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಅಲಹಬಾದ್ ಹೈಕೋರ್ಟ್ ವೈದ್ಯಕೀಯ ಸೀಟಿಗಾಗಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular