ಸ್ವಂತ ಉದ್ಯಮ ಆರಂಭಿಸಿ, ಅದರಲ್ಲೂ ಜನಪ್ರಿಯ ಹೋಟೆಲ್ವೊಂದರ ಬ್ರ್ಯಾಂಡ್ ಹೆಸರಿನಲ್ಲಿ ರೆಸ್ಟೋರೆಂಟ್ ತೆರೆಯಬೇಕು ಎಂಬುದು ಹಲವರ ಬಹುದಿನದ ಕನಸು. ಇದಕ್ಕಾಗಿ ತಮ್ಮ ಉಳಿತಾಯದ ಹಣವನ್ನೇ ಹೂಡಿಕೆ ಮಾಡಲು ಕೆಲವರು ಸಿದ್ಧರಾಗಿರುತ್ತಾರೆ. ಆದರೆ, ಇಂತಹ ಕನಸನ್ನೇ ಬಂಡವಾಳ ಮಾಡಿಕೊಂಡು ವಂಚಕರು ಹಣ ದೋಚಲು ಹೊಸ ತಂತ್ರ ರೂಪಿಸಿದ್ದಾರೆ. ಬೆಂಗಳೂರಿನ ಜನಪ್ರಿಯ ‘ದಿ ರಾಮೇಶ್ವರಂ ಕೆಫೆ’ ಹೆಸರಿನಲ್ಲಿ ನಕಲಿ ಫ್ರಾಂಚೈಸಿ ಆಫರ್ಗಳು ಹರಿದಾಡುತ್ತಿದ್ದು, ಉದ್ಯಮ ಆರಂಭಿಸುವ ಆಸೆಯಲ್ಲಿರುವವರಿಗೆ ಸಂಸ್ಥೆಯೇ ಎಚ್ಚರಿಕೆಯ ಸಂದೇಶ ನೀಡಿದೆ.
ಜನಪ್ರಿಯ ಬ್ರ್ಯಾಂಡ್ನ ಹೆಸರಿನಲ್ಲಿ ಹೋಟೆಲ್ ಆರಂಭಿಸಿದರೆ ಉತ್ತಮ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿರುವ ಉದ್ಯಮಾಸಕ್ತರನ್ನು ಗುರಿಯಾಗಿಸಿಕೊಂಡು ಕೆಲವರು ನಕಲಿ ಫ್ರಾಂಚೈಸಿ ಒಪ್ಪಂದಗಳು ಹಾಗೂ ಲೆಟರ್ ಆಫ್ ಇಂಟೆಂಟ್ (LOI) ನೀಡುತ್ತಿದ್ದಾರೆ. ಇಂತಹ ಆಮಿಷಗಳಿಗೆ ಮರುಳಾಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ, ಯಾವುದೇ ಹಣಕಾಸಿನ ವ್ಯವಹಾರ ನಡೆಸುವ ಮುನ್ನ ಎಚ್ಚರಿಕೆ ವಹಿಸುವಂತೆ ‘ದಿ ರಾಮೇಶ್ವರಂ ಕೆಫೆ’ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಫ್ರಾಂಚೈಸಿ ಕೊಡಿಸುವುದಾಗಿ ಹಣ ಕೇಳುತ್ತಿದ್ದಾರಾ? ಎಚ್ಚರ!
ಫ್ರಾಂಚೈಸಿ ಪಡೆಯಲು ಆಸಕ್ತಿ ತೋರಿಸುವವರನ್ನು ಸಂಪರ್ಕಿಸಿ, ಹಣ ಪಾವತಿಸಿದರೆ ಕೆಫೆಯ ಫ್ರಾಂಚೈಸಿ ಕೊಡಿಸುವುದಾಗಿ ಕೆಲವರು ಆಮಿಷವೊಡ್ಡುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿರುವ ರಾಮೇಶ್ವರಂ ಕೆಫೆ, ಯಾವುದೇ ಮೂರನೇ ವ್ಯಕ್ತಿಗಳ ಏಜೆಂಟ್ಗಳ ಮೂಲಕ ಫ್ರಾಂಚೈಸಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅನಿರೀಕ್ಷಿತ ಪತ್ರಗಳು ಅಥವಾ ಹಣ ಪಾವತಿಗೆ ಸಂಬಂಧಿಸಿದ ಪ್ರಸ್ತಾಪಗಳ ಮೂಲಕವೂ ಫ್ರಾಂಚೈಸಿ ನೀಡುವ ವ್ಯವಸ್ಥೆ ಇಲ್ಲ ಎಂದು ತಿಳಿಸಿದೆ.
ಸಿಇಒ ಜೊತೆ ನೇರ ಮಾತುಕತೆ ಮಾತ್ರ!
ಫ್ರಾಂಚೈಸಿಗೆ ಸಂಬಂಧಿಸಿದ ಅಧಿಕೃತ ಮಾತುಕತೆಗಳು ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನೇರವಾಗಿ, ಮುಖಾಮುಖಿಯಾಗಿ ಹಾಗೂ ಅಧಿಕೃತ ಕಂಪನಿ ಮಾರ್ಗಗಳ ಮೂಲಕವೇ ನಡೆಯುತ್ತವೆ ಎಂದು ಕೆಫೆ ಸ್ಪಷ್ಟಪಡಿಸಿದೆ.
ಹೀಗಾಗಿ ಯಾರಾದರೂ ಫ್ರಾಂಚೈಸಿ ಕೊಡಿಸುವುದಾಗಿ ಹೇಳಿ ಮುಂಗಡ ಹಣ ಕೇಳಿದರೆ ಅಥವಾ ವೈಯಕ್ತಿಕ ಹಾಗೂ ಬ್ಯಾಂಕ್ ವಿವರಗಳನ್ನು ಕೇಳಿದರೆ ಎಚ್ಚರಿಕೆ ವಹಿಸಬೇಕು. ಯಾವುದೇ ಹಣ ಪಾವತಿಸಬಾರದು ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಸಂಸ್ಥೆ ಸೂಚಿಸಿದೆ.
ಜನರಲ್ಲಿ ಜಾಗೃತಿ ಮೂಡಿಸಲು ನಕಲಿ ಒಪ್ಪಂದ ಬಹಿರಂಗ!
ವಂಚಕರು ಹೇಗೆ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿಸುವ ಉದ್ದೇಶದಿಂದ ರಮೇಶ್ವರಂ ಕೆಫೆ ತನ್ನ ಹೆಸರಿನಲ್ಲಿ ಸಿದ್ಧಪಡಿಸಲಾಗಿದ್ದ ನಕಲಿ ಫ್ರಾಂಚೈಸಿ ಒಪ್ಪಂದವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಮೂಲಕ ಉದ್ಯಮ ಆರಂಭಿಸುವ ಆಸಕ್ತರು ಯಾವುದೇ ಆಫರ್ ಬಂದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಕೇವಲ ಬ್ರ್ಯಾಂಡ್ ಹೆಸರು, ಲೋಗೋ ಅಥವಾ ಒಪ್ಪಂದ ಪತ್ರವನ್ನು ನೋಡಿ ನಂಬಿ ಹಣ ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದೆ.
ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆ!
2021ರಲ್ಲಿ ರಾಘವೇಂದ್ರ ರಾವ್ ಮತ್ತು ದಿವ್ಯಾ ರಾಘವೇಂದ್ರ ರಾವ್ ದಂಪತಿ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯನ್ನು ಆರಂಭಿಸಿದ್ದರು. ದಕ್ಷಿಣ ಭಾರತದ ಖಾದ್ಯಗಳ ವಿಶಿಷ್ಟ ರುಚಿ ಮತ್ತು ಜನಪ್ರಿಯತೆಯಿಂದಾಗಿ ಈ ಕೆಫೆ ಕಡಿಮೆ ಅವಧಿಯಲ್ಲೇ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿತು.
ಬೆಂಗಳೂರಿನಲ್ಲಿ ಆರಂಭವಾದ ಈ ಉದ್ಯಮ ಬಳಿಕ ಹೈದರಾಬಾದ್, ಪುಣೆ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಿಗೆ ವಿಸ್ತರಿಸಿದೆ. ಬ್ರ್ಯಾಂಡ್ನ ಹೆಚ್ಚುತ್ತಿರುವ ಜನಪ್ರಿಯತೆಯನ್ನೇ ಬಳಸಿಕೊಂಡು ವಂಚಕರು ನಕಲಿ ಫ್ರಾಂಚೈಸಿ ಆಫರ್ಗಳನ್ನು ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜನಪ್ರಿಯ ಕಂಪನಿಗಳ ಹೆಸರಿನಲ್ಲಿ ಬರುವ ಪ್ರತಿಯೊಂದು ಫ್ರಾಂಚೈಸಿ ಆಫರ್ ಕೂಡ ನಿಜವಾಗಿರುವುದಿಲ್ಲ. ಹಣ ಹೂಡಿಕೆ ಮಾಡುವ ಮುನ್ನ ಸಂಸ್ಥೆಯ ಅಧಿಕೃತ ಮೂಲಗಳಿಂದ ಮಾಹಿತಿ ಖಚಿತಪಡಿಸಿಕೊಳ್ಳಿ.

