ನವದೆಹಲಿ: 2027ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಸರ್ದೇಸಾಯಿ ನೇತೃತ್ವದ ‘ಗೋವಾ ಫಾರ್ವರ್ಡ್ ಪಾರ್ಟಿ'(ಜಿಎಫ್‌ಪಿ) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಮತ್ತು ಆ ಮೂಲಕ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಅಧಿಕಾರದಿಂದ ಕೆಳಗಿಳಿಸುವುದಾಗಿ ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.
ಈ ಮೈತ್ರಿಕೂಟಕ್ಕೆ ‘ಗೋವಾ ಫಸ್ಟ್’ ಎಂದು ಹೆಸರಿಟ್ಟ ಕೇಜ್ರಿವಾಲ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿಯ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಳಒಪ್ಪಂದವಿದ್ದು, ಜನರ ತೀರ್ಪು ವಿರುದ್ಧವಾಗಿದ್ದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದರು.
2017ರ ಚುನಾವಣೆಯಲ್ಲಿ ಜನರ ತೀರ್ಪು ಬಿಜೆಪಿಯ ವಿರುದ್ಧವಿತ್ತು ಮತ್ತು ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದರು; ಆದರೂ, ಕಾಂಗ್ರೆಸ್ ತನ್ನ ಶಾಸಕರನ್ನು ಬಿಜೆಪಿಯತ್ತ ಕಳುಹಿಸುವ ಮೂಲಕ ಆ ಪಕ್ಷ ಸರ್ಕಾರ ರಚಿಸಲು ಸಹಾಯ ಮಾಡಿತು ಎಂದು ಅವರು ಆರೋಪಿಸಿದರು. 2022ರಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಅಗತ್ಯ ಸಂಖ್ಯೆಯ ಬೆಂಬಲವನ್ನು ಒದಗಿಸಿತು ಎಂದು ಅವರು ಆರೋಪಿಸಿದ್ದಾರೆ.
“ಜನರಿಗೆ ಎರಡು ಬಾರಿ ದ್ರೋಹ ಎಸಗಲಾಗಿದೆ. ಆದರೆ, ಮತ್ತೊಮ್ಮೆ ಮೋಸಹೋಗುವ ಮನಸ್ಥಿತಿಯಲ್ಲಿ ಅವರು ಇಲ್ಲ. ಜನರಿಗೆ ಪರ್ಯಾಯ ಆಯ್ಕೆಗಳು ಬೇಕಾಗಿವೆ. ಒಂದು ಕಡೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ಯಾವಾಗಲೂ ಬಿಜೆಪಿಗೆ ಸಹಾಯ ಮಾಡಿದೆ. ಸಾರ್ವಜನಿಕವಾಗಿ ಅವರು ಪರಸ್ಪರ ಟೀಕಿಸಿಕೊಳ್ಳುತ್ತಾರೆ, ಆದರೆ ಅವರ ನಡುವೆ ಒಳಒಪ್ಪಂದವಿದೆ. ಬಿಜೆಪಿಯ ಘಟಕದಲ್ಲಿ ಕಾಂಗ್ರೆಸ್‌ನಿಂದ ಬಂದ ಅನೇಕ ಜನರಿದ್ದಾರೆ. ಅವರೆಲ್ಲರೂ ಭ್ರಷ್ಟರು,” ಎಂದು ಅವರು ಹೇಳಿದರು.
“2027ರಲ್ಲಿ ಸೋಲುತ್ತೇವೆ ಎಂಬುದು ಬಿಜೆಪಿಗೆ ತಿಳಿದಿದೆ, ಆದರೆ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಅವರಿಗಿದೆ. ಆದಾಗ್ಯೂ, ಜನರು ಇದನ್ನು ಬದಲಾಯಿಸಲು ಬಯಸುತ್ತಾರೆ. ಇಲ್ಲಿಯವರೆಗೆ ಜನರಿಗೆ ನಿಜವಾದ ಆಯ್ಕೆ ಇರಲಿಲ್ಲ. ಆದರೆ ಈಗ ಅವರಿಗೆ ‘ಗೋವಾ ಫಸ್ಟ್’ ರೂಪದಲ್ಲಿ ಪ್ರಬಲ ಆಯ್ಕೆ ಸಿಕ್ಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸಲು ಬಯಸುವವರು ನಮಗೆ ಮತ ಹಾಕಬಹುದು,” ಎಂದು ಅವರು ಸೇರಿಸಿದರು.
ಇದೇ ವೇಳೆ ಮಾತನಾಡಿದ ಸರ್ದೇಸಾಯಿ, ‘ಗೋವಾ ಫಸ್ಟ್’ ಮೈತ್ರಿಕೂಟವು ಗೋವಾ ಜನರಿಗೆ ಒಂದು ಪರ್ಯಾಯವಾಗಿದೆ ಎಂದು ಹೇಳಿದರು. ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಅವರು, ಆ ಪಕ್ಷಕ್ಕೆ ಸ್ಪಷ್ಟ ಜನಾದೇಶವಿಲ್ಲ, ಆದರೆ ಕಾಂಗ್ರೆಸ್‌ನ ಅನೇಕ ಶಾಸಕರು ಪಕ್ಷಾಂತರಗೊಂಡ ನಂತರ ವಿಧಾನಸಭೆಯಲ್ಲಿ ಕಾನೂನುಗಳನ್ನು ಬಲವಂತವಾಗಿ ಅಂಗೀಕರಿಸಿದೆ ಎಂದು ಆರೋಪಿಸಿದರು. “ಗೋವಾದ ಜನರಿಗೆ ಮೋಸವಾಗಿದೆ. ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಮೋಸವಾಗಿದೆ, ಏಕೆಂದರೆ ಅವರು ಕಾಂಗ್ರೆಸ್‌ಗೆ ಮತ ನೀಡಿದ್ದರೂ ಅವರಿಗೆ ಬಿಜೆಪಿಯ ಶಾಸಕರು ಸಿಕ್ಕರು. ಹೀಗಾಗಿ, ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಮತ್ತು ಬಿಜೆಪಿಯ ನಿಷ್ಠಾವಂತ ಮತದಾರರಿಗೆ ಮೋಸವಾಗಿದೆ. ಗೋವಾದ ಜನರು ಮೂರನೇ ಬಾರಿಗೆ ಮೋಸಕ್ಕೊಳಗಾಗುವುದನ್ನು ನಾವು ಬಯಸುವುದಿಲ್ಲ,” ಎಂದು ಸರ್ದೇಸಾಯಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಗೋವಾದಲ್ಲಿ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

