ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾವಂತ ಯುವ ಆಲ್ರೌಂಡರ್ ಹಾಗೂ ಆಕ್ರಮಣಕಾರಿ ಓಪನಿಂಗ್ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಬಿರುಸಿನ ಬ್ಯಾಟಿಂಗ್ ಶೈಲಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಮೈದಾನದಲ್ಲಷ್ಟೇ ಅಲ್ಲದೆ ಮೈದಾನದ ಹೊರಗೂ ಅವರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರ ಬ್ಯಾನರ್, ಪೋಸ್ಟರ್ಗಳನ್ನು ಹಿಡಿದು ಬೆಂಬಲಿಸುವುದನ್ನು ನಾವು ನೋಡಿರುತ್ತೇವೆ. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಸಂಪೂರ್ಣವಾಗಿ ಆಶ್ಚರ್ಯಕ್ಕೀಡುಮಾಡಿದೆ.
ದೇಶಾದ್ಯಂತ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ಆಚರಿಸುವ ಸಂಪ್ರದಾಯಿಕ ಹಬ್ಬ ‘ಕರ್ವಾ ಚೌತ್’. ಈ ಪವಿತ್ರ ದಿನದಂದು ಮಹಿಳೆಯರು ಇಡೀ ದಿನ ನಿರಾರ ಆಹಾರ ತಪಸ್ಸು ಮಾಡಿ, ಸಂಜೆ ಚಂದ್ರೋದಯದ ನಂತರ ಚಂದ್ರನಿಗೆ ನೀರನ್ನು ಅರ್ಪಿಸುವ ‘ಅರ್ಘ್ಯ’ ವಿಧಿಯನ್ನು ಪೂರೈಸಿ ಉಪವಾಸ ಮುರಿಯುತ್ತಾರೆ. ಆದರೆ, ಅಭಿಷೇಕ್ ಶರ್ಮಾ ಅವರ ಯುವತಿಯೊಬ್ಬ ಅಭಿಮಾನಿ ಈ ಸಾಂಪ್ರದಾಯಿಕ ಹಬ್ಬಕ್ಕೆ ವಿಭಿನ್ನ ಹಾಗೂ ಕ್ರಿಕೆಟ್ ಪ್ರೇರಿತ ಟ್ವಿಸ್ಟ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯು ಸಂಪ್ರದಾಯಿಕ ಉಡುಗೆ ತೊಟ್ಟು ಕರ್ವಾ ಚೌತ್ ಪೂಜೆಯ ಪ್ರಕ್ರಿಯೆಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಹಬ್ಬದ ನಿಯಮದಂತೆ ಚಂದ್ರನನ್ನು ಜರಡಿಯಿಂದ (Sieve) ನೋಡಿ ‘ಅರ್ಘ್ಯ’ ಅರ್ಪಿಸುವ ಬದಲು, ಆಕೆ ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುತ್ತಿದ್ದ ಅಭಿಷೇಕ್ ಶರ್ಮಾ ಅವರ ಫೋಟೋವನ್ನು ಜರಡಿಯ ಮೂಲಕ ನೋಡಿದ್ದಾಳೆ. ಅಷ್ಟೇ ಅಲ್ಲದೆ, ಭಾವಚಿತ್ರಕ್ಕೆ ಸಂಪ್ರದಾಯಬದ್ಧವಾಗಿ ನೀರನ್ನು ಅರ್ಪಿಸಿ ಪೂಜೆ ನೆರವೇರಿಸಿದ್ದಾಳೆ.
ಸಂಪ್ರದಾಯಿಕ ಪೂಜಾ ಪದ್ಧತಿಗೆ ತಮ್ಮ ನೆಚ್ಚಿನ ಕ್ರಿಕೆಟಿಗನ ಮೇಲಿನ ಅಭಿಮಾನವನ್ನು ಜೋಡಿಸಿದ ಈ ಯುವತಿಯ ಶೈಲಿ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕ್ರಿಕೆಟ್ ಪ್ರಿಯರು ಹಾಗೂ ಸೋಷಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೋವನ್ನು ನೋಡಿ ಹಾಸ್ಯಸ್ಪದ ಮತ್ತು ಆಶ್ಚರ್ಯಕರ ಕಾಮೆಂಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯುವ ಆಟಗಾರ ಅಭಿಷೇಕ್ ಶರ್ಮಾ ಅವರಿಗೆ ಭಾರತದಲ್ಲಿರುವ ಅಪಾರ ಫ್ಯಾನ್ ಫಾಲೋಯಿಂಗ್ಗೆ ಈ ವಿಡಿಯೋ ಸಾಕ್ಷಿಯಾಗಿದೆ.

