HomeLatest Newsಮಸೀದಿಗೆ ಜಾಗ ದಾನ ವದಂತಿಗೆ ತೆರೆಬಿದ್ದ ಸತ್ಯ: ಸುಳ್ಳು ಸುದ್ದಿ ಹರಡುವವರಿಗೆ ಸಾನಿಯಾ ಮಿರ್ಜಾ ತಂದೆ...

ಮಸೀದಿಗೆ ಜಾಗ ದಾನ ವದಂತಿಗೆ ತೆರೆಬಿದ್ದ ಸತ್ಯ: ಸುಳ್ಳು ಸುದ್ದಿ ಹರಡುವವರಿಗೆ ಸಾನಿಯಾ ಮಿರ್ಜಾ ತಂದೆ ಖಡಕ್ ತಿರುಗೇಟು!

ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿರುವ ಮಸೀದಿಯೊಂದಕ್ಕೆ ಜಾಗ ದಾನ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ನಾಜಿಯಾ ಇಲಾಹಿ ಖಾನ್ ಸೇರಿದಂತೆ ಹಲವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಸಾನಿಯಾ ಮಿರ್ಜಾ ನಿರ್ಧಾರವನ್ನು ಪ್ರಶ್ನಿಸಿದ್ದರು. ಈ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದಂತೆ ಇದೀಗ ಸಾನಿಯಾ ಮಿರ್ಜಾ ಅವರ ಕುಟುಂಬವು ಸೋಷಿಯಲ್ ಮೀಡಿಯಾ ಮೂಲಕ ಮೌನ ಮುರಿದಿದ್ದು, ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದೆ.

ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ಇಮ್ರಾನ್ ಮಿರ್ಜಾ ಅವರ ಅಧಿಕೃತ ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ ಹರಿದಾಡುತ್ತಿರುವ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಪ್ರಕಟಣೆ ಹೊರಡಿಸಿದ್ದು, “ಸಾನಿಯಾ ಮಿರ್ಜಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಹಾಗೂ ತಿರುಚಲಾದ ಸುದ್ದಿಗಳಾಗಿವೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿ ಇರುವ ಜಾಗದಲ್ಲಿ ಯಾವುದೇ ಮಸೀದಿಯನ್ನು ನಿರ್ಮಿಸಲಾಗುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಜೊತೆ ಸಾನಿಯಾ ಮಿರ್ಜಾ ಇರುವಂತೆ ವೈರಲ್ ಆಗಿರುವ ಫೋಟೋವನ್ನು ಉಲ್ಲೇಖಿಸಿದ ಅವರು, “ಅದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿದೆ” ಎಂದು ತಿಳಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಸಾನಿಯಾ ಮಿರ್ಜಾ ತಮ್ಮ ಸ್ವಂತ ಹಣದಿಂದ ಖರೀದಿಸಿದ ಜಾಗವನ್ನು ಹೇಗೆ ಬೇಕಾದರೂ ಬಳಸಿಕೊಳ್ಳುವ ಹಕ್ಕು ಅವರಿಗಿದೆ. ಆದರೆ ಅಕಾಡೆಮಿ ಜಾಗದಲ್ಲಿ ಮಸೀದಿ ಕಟ್ಟಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಾನಿಯಾ ಮಾಡುವ ಯಾವುದೇ ಸಾಮಾಜಿಕ ಅಥವಾ ಧರ್ಮಾರ್ಥ ಕಾರ್ಯಗಳು ಅವರ ವೈಯಕ್ತಿಕ ವಿಷಯವಾಗಿದ್ದು, ಸಾನಿಯಾ ಸ್ವತಃ ದೃಢಪಡಿಸದ ಹೊರತು ಅದರ ಬಗ್ಗೆ ಸಾರ್ವಜನಿಕವಾಗಿ ಮಾತಾಡುವ ಹಕ್ಕು ಯಾರಿಗೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023 ರಲ್ಲಿ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ ಆರು ಗ್ರಾಂಡ್ ಸ್ಲ್ಯಾಮ್ ವಿಜೇತೆ ಸಾನಿಯಾ ಮಿರ್ಜಾ, ದೇಶದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಇದೀಗ ಅವರ ತಂದೆಯ ಸ್ಪಷ್ಟನೆಯಿಂದಾಗಿ ಮಸೀದಿಗೆ ಜಾಗ ನೀಡಿದ್ದಾರೆ ಎಂಬ ಸುಳ್ಳು ವದಂತಿಗಳಿಗೆ ತೆರೆಬಿದ್ದಂತಾಗಿದೆ.


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular