HomeKarnataka‘ಬಿಮ್ಸ್’ನಲ್ಲಿ ಅವಧಿ ಮೀರಿದ ಔಷಧ ಪತ್ತೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಉಪ ಲೋಕಾಯುಕ್ತ ಬಿ. ವೀರಪ್ಪ...

‘ಬಿಮ್ಸ್’ನಲ್ಲಿ ಅವಧಿ ಮೀರಿದ ಔಷಧ ಪತ್ತೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಉಪ ಲೋಕಾಯುಕ್ತ ಬಿ. ವೀರಪ್ಪ ಸೂಚನೆ

ಬೆಳಗಾವಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ಬೆಳಗಾವಿಯ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅನೀರಿಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ನೋಂದಣಿ‌ ಕೌಂಟರ್, ಶುದ್ಧ ಕುಡಿಯುವ ನೀರು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಮಾಹಿತಿ ಪಡೆದು, ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತದನಂತರ ಒಳ ರೋಗಿಗಳ ವಿಭಾಗ, ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗ,ಸೇರಿದಂತೆ ವಿವಿಧ‌ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಪತ್ರೆಯಲ್ಲಿ ದಾಖಾಲಗಿರುವ ರೋಗಿಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ‌ ಪಡೆದುಕೊಂಡರು. ಪೌಷ್ಟಿಕ‌ ಆಹಾರ ಸೇವಿಸುವಂತೆ ಸಲಹೆ ನೀಡಿದ ಅವರು, ಬೇಗ ಗುಣಮುಖರಾಗುವಂತೆ‌ ಧೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ ರೋಗಿಯೊಬ್ಬರ ಗಾಯಕ್ಕೆ ತ್ವರಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಹೊರ ರೋಗಿಗಳ ದಾಖಲಾತಿಗೆ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತರು ಹೊರ ರೋಗಿಗಳ ದಾಖಲಾತಿ ಕಾರ್ಯ ವಿಧಾನವನ್ನು ಪರಿಶೀಲಿಸಿ ರೋಗಿಗಳಿಂದ ಆಸ್ಪತ್ರೆಯ ಕಾರ್ಯ ವೈಖರಿ ಕುರಿತು‌ ಮಾಹಿತಿ ಪಡೆದರು. ಹೊರ ರೋಗಿಗಳ ಜೌಷಧ  ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಜೌಷಧಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿನ ವೈದ್ಯರು ರೋಗಿಗಳಿಂದ‌ ಹಣ ಪಡೆಯದಂತೆ ಹಾಗೂ ಔಷಧಿಗಳನ್ನು ಹೊರಗಿನಿಂದ ತರುವಂತೆ ಬರೆದು ಕೊಡದಂತೆ ನಿಗಾವಹಿಸಲು ಸೂಚಿಸಿದರು.

ಆಸ್ಪತ್ರೆಯ ಔಷದ ಉಗ್ರಾಣಕ್ಕೆ ಭೇಟಿ ನೀಡಿದ ಅವರು ಉಗ್ರಾಣದಲ್ಲಿ ರೇಬಿಸ್ ಸೇರಿದಂತೆ ವಿವಿಧ ಕಾಯಿಲೆಗಳ ಲಕ್ಷಾಂತರ ರೂಪಾಯಿಗಳ  ಅವಧಿ ಮುಗಿದು ಹೋದಂತಹ ಲಸಿಕೆಗಳನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಸಮಗ್ರ ವರದಿ ಸಲ್ಲಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.

ತದನಂತರ ಬಿಮ್ಸ್ ರಕ್ತ‌ ಭಂಡಾರಕ್ಕೆ ಭೇಟಿ ನೀಡಿ ವಿವಿಧ ರಕ್ತ ಗುಂಪುಗಳ ದಾಸ್ತಾನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಬಿಮ್ಸ್ ನಿರ್ದೆಶಕ ವಿನಯ ದಾಸ್ತಿಕೊಪ್ಪ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಆಯ್.ಪಿ.ಗಡಾದ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮಹಾನಗರ ಪಾಲಿಕೆಗೆ ಭೇಟಿ: ನಾಗರಿಕರಿಂದ ದೂರು ಬಂದರೆ ಕಠಿಣ ಕ್ರಮ-ಅಧಿಕಾರಿಗಳಿಗೆ ಎಚ್ಚರಿಕೆ

ಬೆಳಗಾವಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಪಾಲಿಕೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಪಾಲಿಕೆಯ ಸಿಬ್ಬಂದಿಗಳ ಹಾಜರಾತಿ, ನಗದು ವಹಿ, ಚಲನವಲನ ವಹಿಗಳನ್ನು ಮಾಹಿತಿ ಪಡೆದು ಪರಿಶೀಲಿಸಿದ ಅವರು ಹಾಜರಾತಿ ವಹಿಯನ್ನು ಸರಿಯಾಗಿ ನಿರ್ವಹಿಸದೆ ಇರುವುದರ ಕುರಿತು ಪ್ರಶ್ನಿಸಿದರು.

ಬೆಳಗ್ಗೆ ಹಾಗೂ ಸಂಜೆ ಕಡ್ಡಾಯವಾಗಿ ಹಾಜರಾತಿ ಹಾಕುವಂತೆ ಸೂಚಿಸಿದರು. ಕಳೆದ ಮೂರು ತಿಂಗಳುಗಳ ಸಿಬ್ಬಂದಿಗಳ ಹಾಜರಾತಿ ವಿವರ ಹಾಗೂ ವಿವಿಧ ಶಾಖೆಗಳ ಮುಖ್ಯಸ್ಥರ ಮೂರು ತಿಂಗಳುಗಳ ವೇತನ ವಿವರಗಳನ್ನು‌ ಪಡೆದುಕೊಂಡರು.

ಮಾಂಜಾ ದಾರದಿಂದ ಸಾವಿಗಿಡಾದ ದುರ್ದೈವಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಪರಿಹಾರ ಒದಗಿಸಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ‌ ಜರುಗಿಸುವ ಕುರಿತು ಎಚ್ಚರಿಕೆ ನೀಡಿದರು.

ಅಲ್ಲದೇ ಈ ವಿಷಯದ ಕುರಿತು ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಿಗೆ ಮಾಹಿತಿ ಒದಗಿಸಲು ದೂರವಾಣಿಯಲ್ಲಿ ಸರಿಯಾಗಿ ಸ್ಪಂದಿಸದೇ ಇರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ಪಾಲಿಕೆಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ ಅವರು ಪಾಲಿಕೆ ವತಿಯಿಂದ ಲೀಸ್ ಗೆ ನೀಡಿದ ನಿವೇಶನಗಳ ಮಾಹಿತಿ ಪಡೆದು ದೀರ್ಘಾವಧಿಗೆ ಲೀಸ್ ನೀಡಿದ ನಿವೇಶನಗಳ ಸಂಪೂರ್ಣ ವಿವರಗಳನ್ನು ಹಾಗೂ  ಪಾಲಿಕೆಯ ಜಾಗೆಯನ್ನು ಒತ್ತುವರಿ ಮಾಡಿದವರ ವಿವರಗಳನ್ನು ಒದಗಿಸಲು ತಿಳಿಸಿದರು.

ಕಚೇರಿಯ ಸಿಬ್ಬಂದಿಗಳ‌ ಮೊಬೈಲ್‌ ಪರಿಶೀಲಿಸಿದ ಉಪ ಲೋಕಾಯುಕ್ತರು, ಸಿಬ್ಬಂದಿಗಳ ಬ್ಯಾಂಕ್‌ ವಿವರಗಳನ್ನು ಒದಗಿಸಲು ತಿಳಿಸಿದರು. ಪಾಲಿಕೆಯ ವಾಹನಗಳ ಮಾಹಿತಿ ಪಡೆದ ಅವರು ಅವುಗಳಲ್ಲಿ ಫಿಟನೆಸ್ ಇರುವ ವಾಹನಗಳ ವಿವರ ಪಡೆದುಕೊಂಡರು.

ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿತ್ತಿರುವ, ಕುಡಿಯುವ ನೀರು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ 38 ಸಾವಿರ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ ಸಿಬ್ಬಂದಿಗಳ ಮಾತನ್ನು ಒಪ್ಪದ‌ ಅವರು, ಒಂದು ವೇಳೆ ಬೀದಿ ದೀಪಗಳ ಕುರಿತು ನಾಗರಿಕರಿಂದ ದೂರುಗಳು ಬಂದಲ್ಲಿ ಸಿಬ್ಬಂದಿಯ ವಿರುದ್ಧ ಕ್ರಮ‌ ಜರುಗಿಸುವ ಎಚ್ಚರಿಕೆ ನೀಡಿದರು.

ಬೆಳಗಾವಿ ನಗರದಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದ್ದು, ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಾದಚಾರಿ ಮಾರ್ಗ ಅತಿಕ್ರಮಣಕಾರರ ವಿರುದ್ಧ ದೂರು ದಾಖಲಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ, ಪಾಲಿಕೆ ಆಯುಕ್ತ ಎಂ.ಕಾರ್ತಿಕ  ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular