alex Certify ‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ‘ವಿಶ್ವ ಯೋಗ ದಿನಾಚರಣೆ’, ಆದರೆ ಕೊರೊನಾ ಸೋಂಕಿನ ಕಾರಣಕ್ಕಾಗಿ ಈ ಬಾರಿ ಇದನ್ನು ಸಾಮೂಹಿಕವಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯೋಗದ ಮಹತ್ವ ಕುರಿತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಯೋಗಾಂಗಾನುಷ್ಟಾನಾದ ಶುದ್ದಿ ಕ್ಷಯೇ ಜ್ಞಾನದೀಪ್ತಿರಾ ವಿವೇಕ ಖ್ಯಾತಃ

ಪಾತಂಜಲ ಯೋಗಸೂತ್ರದ ಸಮಾಧಿಪಾದದ 28ನೆಯ ಸೂತ್ರದ ಪ್ರಕಾರ ಅಷ್ಟಾಂಗ ಯೋಗದ ಅನುಷ್ಟಾನದಿಂದ ಯೋಗಾಭ್ಯಾಸಿಯ ಚಿತ್ತದ ಅಶುದ್ದಿಯು ಕರಗಿ ಅವನಿಗೆ ವಿವೇಕ ಲಭಿಸುವವರೆಗೆ ಜ್ಞಾನದೀವಿಗೆಯಾಗಿರುವುದು ಎಂಬರ್ಥದ ಈ ಸೂತ್ರದಲ್ಲಿ ಸೂಚಿಸಿರುವ ಅಷ್ಟಾಂಗ, ಯೋಗದ 8 ಹಂತಗಳು ಮತ್ತು ಅವುಗಳ ಸಂಕ್ಷಿಪ್ತ ವಿವರಣೆಗಳು ಓದುಗರಿಗಾಗಿ ಸಂಗ್ರಹಿಸಿ ನೀಡಲಾಗಿದೆ.

ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರಾಧಾರಣ ಧ್ಯಾನ ಸಮಾಧಯೋಷ್ಟಾವಂಗಾನಿ

ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ ಇವೇ ಅಷ್ಟಾಂಗಗಳು.

ಅಹಿಂಸಾ-ಸತ್ಯಾಸ್ತೇಯ : ಬ್ರಹ್ಮಚರ್ಯಾ ಪರಿಗ್ರಹಾ ಯಮಾಃ 

1) ಯಮ : ಇಲ್ಲಿ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಸಾರ್ವತ್ರಿಕ ನಿಯಮಗಳು ಅಂದರೆ ಸಾಮಾಜಿಕ ಶಿಸ್ತಿನ ಬಗ್ಗೆ, ಅವುಗಳ ಅನುಶಾಸನದ ಬಗ್ಗೆ ತಿಳಿಸಲಾಗಿದೆ. ಯಾವುದೆಂದರೆ

ಅ] ಅಹಿಂಸೆ : ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸದಿರುವುದು – ವೈರತ್ವ-ತ್ಯಾಗ

ಆ] ಸತ್ಯ : ಯಾವಾಗಲೂ ಸತ್ಯವಾಕ್ಯ ಪರಿಪಾಲನೆ.

ಇ] ಆಸ್ತೇಯ : ಕದಿಯದೇ ಇರುವುದು, ವಸ್ತುಗಳ ಬಗ್ಗೆ ಅಪೇಕ್ಷೆ ಸಲ್ಲದು.

ಈ] ಬ್ರಹ್ಮಚರ್ಯ : ಪಂಚೇಂದ್ರಿಯಗಳ ನಿಗ್ರಹ, ಜ್ಞಾನ ಸಂಪಾದನೆ

ಉ] ಅಪರಿಗ್ರಹ : ‘ಬೇಕು-ಬೇಕು’ ಎಂಬ ಮನಸ್ಥಿತಿಯಿಂದ ‘ಸಾಕು-ಸಾಕು’ಗೆ ಪರಿವರ್ತನೆ.

ಶೌಚ-ಸಂತೋಷ-ತಪಃ ಸ್ವಾಧ್ಯಾಯೇಶ್ವರ ಪ್ರಣೇಧಾನಾನಿ ನಿಯಮಾಃ 

2) ನಿಯಮ : ಇಲ್ಲಿ ಪ್ರತಿಯೊಬ್ಬರು ಪಾಲಿಸಬೇಕಾದ ವೈಯುಕ್ತಿಕ ನಿಯಮಗಳ ಬಗ್ಗೆ ಅಂದರೆ ನಡವಳಿಕೆಗಳು, ನಿಬಂಧನೆಗಳು, ಚೌಕಟ್ಟುಗಳ ಬಗ್ಗೆ ತಿಳಿಸಲಾಗಿದೆ. ಯಾವುದೆಂದರೆ

ಅ] ಶೌಚ : ದೇಹ-ಮನಸ್ಸುಗಳ, ಅಂತರಂಗ-ಬಹಿರಂಗಗಳ ಶುದ್ಧತೆ

ಆ] ಸಂತೋಷ : ತೃಪ್ತ ಭಾವನೆ ಹೊಂದಿ ಮನಸ್ಸಿನ ಶಾಂತಿ ಕಾಪಾಡಿಕೊಳ್ಳುವುದು.

ಇ] ಸ್ವಾಧ್ಯಾಯ : ಸ್ವವಿಮರ್ಶೆ ಮಾಡಿಕೊಳ್ಳುತ್ತಾ ಜೀವನದ ಬಗ್ಗೆ ಹೊಸ ದೃಷ್ಟಿ-ಸೃಷ್ಟಿ.

ಈ] ತಪಸ್ಸು : ಸಾಧನೆಯ ಮಾರ್ಗದಲ್ಲಿ ಅಡಚಣೆ ಅಡ್ಡಿಗಳನ್ನು ದಹಿಸುವುದು.

ಉ] ಈಶ್ವರ ಪ್ರಣೀಧಾನ : ದೇವರಿಗೆ ನಮ್ಮ ತಪ್ಪು-ಒಪ್ಪುಗಳ ಸಮರ್ಪಣೆ, ಶರಣಾಗತ ಭಾವ.

ಸ್ಥಿರಂಸುಖಮಾಸನಂ 

3) ಆಸನ : ದೇಹದ ಭಂಗಿಯ ಕುರಿತು ‘ಆಸನಾನಿ ಚ ತಾವಂತೋ ಯಾವಂತೋ ಜೀವ ಜಂತವಃ’ ಅಂದರೆ ಈ ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳೆಷ್ಟೊ, ಅಷ್ಟು ಆಸನಗಳಿವೆ. ದೇಹ ಮತ್ತು ಮನಸ್ಸುಗಳ ಸಾಮರಸ್ಯ ಏರ್ಪಡಿಸಲು ಆಸನಗಳ ಕಲಿಕೆ ಆರೋಗ್ಯ ದೃಷ್ಟಿಯಿಂದ ಅನಿವಾರ್ಯ.

ತಸ್ಮಿನ್ ಸತಿ ಶ್ವಾಸಪ್ರಶ್ವಾಯೋರ್ಗತಿ ವಿಚ್ಛೇದಃ ಪ್ರಾಣಾಯಾಮಃ 

4) ಪ್ರಾಣಾಯಾಮ : ನಮ್ಮ ಉಸಿರಾಟದ ನಿಯಂತ್ರಣದಿಂದ ದೇಹ, ಮನಸ್ಸುಗಳಲ್ಲಿ ಉಂಟಾಗುವ ಅತ್ಯದ್ಭುತ ಪರಿಣಾಮ, ಫಲಿತಾಂಶಗಳ ಕುರಿತಾದ ಕಲಿಕೆ, ಪ್ರಾಣಗಳಲ್ಲಿ ಪಂಚವಿಧ.

ಅ] ಪ್ರಾಣ

ಆ] ಅಪಾನ

ಇ] ವ್ಯಾನ

ಈ] ಉದಾನ

ಉ] ಸಮಾನ ಮತ್ತು ಇವುಗಳಿಗೆ ಉಪಪ್ರಾಣಗಳಾಗಿ

ಊ] ನಾಗ

ಋ] ಕೃಕರ

ಎ] ಕೂರ್ಮ

ಏ] ದೇವದತ್ತ

ಐ] ಧನಂಜಯಗಳು ಸಹ ದೇಹದ ವಿವಿಧೆಡೆ ಕಾರ್ಯನಿರ್ವಹಿಸಿ ಆರೋಗ್ಯವನ್ನು ಕಾಪಾಡುತ್ತವೆ.

ಪ್ರಾಣಾಯಾಮಗಳಲ್ಲಿ ಮುಖ್ಯವಾಗಿ 8 ವಿಧಗಳು.

1] ಸೂರ್ಯಭೇದನ

2] ಉಜ್ಜಾಯಿ

3] ಶೀತ್ಕರಿ

4] ಶೀತಲಿ

5] ಭಸ್ತ್ರಿಕಾ

6] ಭ್ರಾಮರಿ

7] ಮೂರ್ಚಾ

8] ಪ್ಲಾವಿನಿ

ಸ್ವವಿಷಯಾ ಸಂಪ್ರಯೋಗೇ ಚಿತ್ತಸ್ಯ ಸ್ವರೂಪಾನುಕಾರ ಇವೇಂದ್ರಿಯಾಣಾಂ ಪ್ರತ್ಯಾಹಾರಃ

5) ಪ್ರತ್ಯಾಹಾರ : ಪ್ರತಿಯಾದ + ಆಹಾರ = ಪ್ರತ್ಯಾಹಾರ. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳಿಗೆ ಆಹಾರವೆನಿಸಬಹುದಾದ ಬಾಹ್ಯ ಪ್ರಪಂಚದ ಆಕರ್ಷಣೆಗಳಿಂದ ಮನಸ್ಸನ್ನು ಅಂತರ್ಮುಖಗೊಳಿಸುವ ಅಂತರಂಗದ ಸಾಧನೆಗೆ ಸೋಪಾನವೇ ಈ ಹಂತ.

ದೇಶಬಂಧಶ್ಚಿತ್ತಸ್ಯ ಧಾರಣಾಃ 

6) ಧಾರಣ : ಚಂಚಲವಾದ ಮನಸ್ಸನ್ನು ಒಂದು ವಸ್ತುವಿನಲ್ಲಿ ನಿಲ್ಲಿಸುವುದೇ ಧಾರಣ ಸ್ಥಿತಿ. ಧಾರಣಾಸು ಚ ತ ಯೋಗ್ಯತಾ ಮನಸಾ ಮನಸ್ಸಿಗೆ ಅಂತರ್ಮುಖವಾಗಿಸುವ ಕಠಿಣ ಸಾಧನೆಯೇ ಮುಂದಿನ ಹಂತದ ಸಿದ್ಧತೆಗೆ ದಾರಿ.

ತತ್ರ ಪ್ರತ್ಯಯೈಕತಾನತಾ ಧ್ಯಾನಮ್ 

7) ಧ್ಯಾನ : ಧ್ಯಾನವೆಂದರೆ ‘ಮನಸ್ಸಿನ ಸ್ನಾನ’ವೆಂದು ಸುಲಭವಾಗಿ ಹೇಳುತ್ತೇವೆ. ಸದಾಶಿವನಿಗೆ ಅದೇ ಧ್ಯಾನ ಎನ್ನುತ್ತೇವೆ. ಆದರೆ ಧ್ಯಾನದ ಮಹತ್ವವನ್ನು ಅರಿತವನೇ ಬಲ್ಲ. ಮನಸ್ಸನ್ನು ಸಂಪೂರ್ಣವಾಗಿ ಒಂದೇ ಚಿಂತನೆಯಲ್ಲಿ ಪಳಗಿಸುವುದೇ ಧಾರಣದ ಮುಂದಿನ ಹಂತವಾದ ಈ ಧ್ಯಾನ. ಪ್ರತಿನಿತ್ಯದ 5-10 ನಿಮಿಷಗಳ ಧ್ಯಾನದಿಂದ ಅಪರಿಮಿತ ಲಾಭಗಳನ್ನು ಗಳಿಸಬಹುದಾಗಿದೆ.

ಎಲ್ಲ ಚಿಂತೆಗಳನ್ನು ಹಸಿ-ಬಿಸಿ ಆಲೋಚನೆಗಳನ್ನು ಮರೆತು ಒಂದೈದು ನಿಮಿಷಗಳ ಕಾಲ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಜವಾದ ಆನಂದದ ಅನುಭೂತಿಯನ್ನು ಪಡೆಯಿರಿ.

ತದೇವ ಅರ್ಥಮಾತ್ರ ನಿರ್ಭಸಂ ಸ್ವರೂಪಶೂನ್ಯಮಿವ ಸಮಾಧಿಃ

8) ಸಮಾಧಿ : ಕಣ್ಣಿಗೆ ಕಾಣದ ಕೇವಲ ಅನುಭವಕ್ಕೆ ಮಾತ್ರವೇ ಬರುವ ಪರಮೋಚ್ಛ ಆನಂದದ ಮಾನಸಿಕ ಸ್ಥಿತಿಯಿದು. ಚಿತ್ತವೃತ್ತಿಗಳು ನಾಶವಾಗಿ, ಸುಪ್ತಶಕ್ತಿಗಳು ಜಾಗೃತವಾಗುವ, ಆತ್ಮ-ಪರಮಾತ್ಮನಲ್ಲಿ ಲೀನವಾಗುವ, ಪರಮಾನಂದವನ್ನು, ಜೀವನ್ಮುಕ್ತಿಯನ್ನು ಪಡೆಯುವ ಈ ಮಾನಸಿಕ ಸ್ಥಿತಿಯನ್ನು ಹೊಂದುವುದು ಅಥವಾ ಸತತ ಸಾಧನೆಯಿಂದ ಗಳಿಸುವುದೇ ಪ್ರತಿಯೊಬ್ಬ ಯೋಗಾಭ್ಯಾಸಿಯ ಪರಮಗುರಿಯೇ ಸಮಾಧಿ.

ಯೋಗಾಚಾರ್ಯ : ಅನಿಲ್ ಕುಮಾರ್ ಹೆಚ್ ಶೆಟ್ಟರ್, ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪುರಸ್ಕೃತರು

ಕಣಾದ ಯೋಗ & ರೀಸರ್ಚ್ ಫೌಂಡೇಶನ್ (ರಿ), ನಂ.9, ಸ್ಕಿನ್ ಟಚ್ ಯೋಗ ಶಾಪ್

3 ನೇ ಕ್ರಾಸ್ ದುರ್ಗಿಗುಡಿ, ಶಿವಮೊಗ್ಗ

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...