ಕಳೆದ ವರ್ಷ ಉತ್ತರ ಪ್ರದೇಶದ ಕುಂಭಮೇಳದಲ್ಲಿ ಮಣಿಗಳನ್ನು ಮಾರುತ್ತಾ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ವೈರಲ್ ಆಗಿದ್ದ ಮಧ್ಯಪ್ರದೇಶದ ಯುವತಿ ಮೊನಾಲಿಸಾ ಭೋನ್ಸ್ಲೆ ಎಲ್ಲರಿಗೂ ಅಚ್ಚರಿಯ ಶಾಕ್ ನೀಡಿದ್ದಾರೆ. ಇತ್ತೀಚೆಗೆ ಈಕೆ ತನ್ನ ಪ್ರಿಯತಮನೊಂದಿಗೆ ಕೇರಳದ ತಿರುವನಂತಪುರದ ಪೊಲೀಸ್ ಸ್ಟೇಷನ್‌ನಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.
ಕುಂಭಮೇಳದಲ್ಲಿ ತನ್ನ ಅಪ್ಪಟ ಸೌಂದರ್ಯ ಮತ್ತು ಕಾಂತಿಯುತ ಕಣ್ಣುಗಳಿಂದ ಎಲ್ಲರ ಗಮನ ಸೆಳೆದಿದ್ದ ಮೊನಾಲಿಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಒದಗಿ ಬಂದಿದ್ದವು. ಈಗಾಗಲೇ ಬಾಲಿವುಡ್ ಜೊತೆಗೆ ತೆಲುಗಿನಲ್ಲೂ ಸಿನಿಮಾಗಳನ್ನು ಮಾಡುತ್ತಿರುವ ಈಕೆ, ಜಾಹೀರಾತುಗಳಲ್ಲೂ ಬ್ಯುಸಿಯಾಗಿದ್ದಾರೆ. ಆದರೆ ಈಗ ಮೊನಾಲಿಸಾ ಊಹಿಸಲಾಗದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಫೇಸ್‌ಬುಕ್ ಮೂಲಕ ಪರಿಚಯವಾದ ಕೇರಳದ ಯುವಕ ಫರ್ಮಾನ್ ಖಾನ್ ಎಂಬುವವರನ್ನು ಮೊನಾಲಿಸಾ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಾರೆ. ಆದರೆ ಇವರ ಪ್ರೇಮಕ್ಕೆ ಎರಡು ಕುಟುಂಬದ ಹಿರಿಯರು ಒಪ್ಪಿಗೆ ನೀಡಿಲ್ಲ. ಇದರಿಂದಾಗಿ ಪ್ರಿಯತಮನ ಹುಡುಕಿಕೊಂಡು ಕೇರಳದ ತಿರುವನಂತಪುರಕ್ಕೆ ಮೊನಾಲಿಸಾ ಬಂದಿದ್ದಾರೆ. ತಮಗೆ ರಕ್ಷಣೆ ನೀಡಬೇಕೆಂದು ಈ ಪ್ರೇಮಿಗಳು ಪೊಲೀಸರ ಮೊರೆ ಹೋಗಿದ್ದಾರೆ.
ಮೊನಾಲಿಸಾ ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾಗಿದ್ದು, ಫರ್ಮಾನ್ ಖಾನ್ ಮಹಾರಾಷ್ಟ್ರದವರು (ಪ್ರಸ್ತುತ ಕೇರಳದಲ್ಲಿದ್ದಾರೆ). ತನ್ನ ತಂದೆ ವಿಜಯ್ ಸಿಂಗ್ ಭೋನ್ಸ್ಲೆ ತನಗೆ ಬೇರೆ ವ್ಯಕ್ತಿಯೊಂದಿಗೆ ಬಲವಂತದ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೊನಾಲಿಸಾ, ನಮಗೆ ರಕ್ಷಣೆ ನೀಡಿ ಎಂದು ಪೊಲೀಸರನ್ನು ಕೋರಿದ್ದಾರೆ.
ಮೊನಾಲಿಸಾ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆಕೆಗೆ ಯಾವುದೇ ದೈಹಿಕ ಕಿರುಕುಳವಾಗಿಲ್ಲ, ಕೇವಲ ಬಲವಂತದ ಮದುವೆಯ ಕಾರಣಕ್ಕೆ ರಕ್ಷಣೆ ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೇ ಕೇಸ್ ದಾಖಲಿಸದಿದ್ದರೂ, ಕಾನೂನುಬದ್ಧವಾಗಿ ಅವರಿಗೆ ಸಹಾಯ ಮಾಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಸಿನಿಮಾ ಜಗತ್ತಿನಲ್ಲಿ ಮೊನಾಲಿಸಾ : ಕುಂಭಮೇಳದಲ್ಲಿ ಈಕೆಯ ಸೌಂದರ್ಯ ಕಂಡು ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಸರೋಜ ಮಿಶ್ರಾ ಅವರು ತಮ್ಮ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ನೀಡಿದ್ದರು. ಇದಲ್ಲದೆ ತೆಲುಗಿನಲ್ಲಿ ಸಾಯಿ ಚರಣ್ ನಾಯಕನಾಗಿ ನಟಿಸುತ್ತಿರುವ ‘ಲೈಫ್’ ಎಂಬ ಚಿತ್ರದಲ್ಲೂ ಮೊನಾಲಿಸಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ಸದ್ಯ ಚಿತ್ರೀಕರಣ ನಡೆಯುತ್ತಿದೆ.

