ವಿಜಯನಗರ: ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಅಂಕಪಟ್ಟಿಯಲ್ಲಿ ಮತ್ತೊಂದು ಎಡವಟ್ಟು ಮಾಡಿದೆ. ಬಿಬಿಎ ವಿದ್ಯಾರ್ಥಿಗಳ ಫಲಿತಾಂಶದಲ್ಲಿ 700 ಗರಿಷ್ಠ ಅಂಕಗಳ ಬದಲಿಗೆ 1163 ಅಂಕಗಳನ್ನು ಮುದ್ರಿಸಿರುವುದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಗರಿಷ್ಠ 700ಕ್ಕೆ 996, 1080, 1100, 840 ಮತ್ತು 1163 ಅಂಕಗಳನ್ನು ಮುದ್ರಿಸಿದ್ದು, ಇದನ್ನು ನೋಡಿ ವಿದ್ಯಾರ್ಥಿಗಳೇ ಶಾಕ್ ಆಗಿದ್ದಾರೆ. ಬಿಬಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ತಪ್ಪು ಕಂಡುಬಂದಿದ್ದು, ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಇದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಬಿಬಿಎ ಪದವಿ ಕೋರ್ಸ್‌ನಲ್ಲಿ ಏಳು ವಿಷಯಗಳು ಇದ್ದು, ಪ್ರತಿ ವಿಷಯಕ್ಕೂ ಗರಿಷ್ಠ 100 ಅಂಕಗಳಿರುತ್ತವೆ. ಹೀಗಾಗಿ ಒಟ್ಟು ಗರಿಷ್ಠ ಅಂಕ 700 ಮಾತ್ರವಾಗುತ್ತದೆ. ಆದರೆ ಕೆಲ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕಕ್ಕಿಂತಲೂ ಹೆಚ್ಚು ಅಂಕಗಳನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಯ ಬಳ್ಳಾರಿಯ ಖಾಸಗಿ ಎಸ್ಜಿಟಿ ಪದವಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ಎಡವಟ್ಟು ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್.ಎಂ. ಸಾಲಿ ಅವರು, ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ. ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ತಪ್ಪು ಕಂಡುಬಂದಿದ್ದು, ಸಮಸ್ಯೆಯನ್ನು ಈಗಾಗಲೇ ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಈ ಹಿಂದೆ ಕೂಡ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾರ್ಕ್ಸ್ ಕಾರ್ಡ್‌ನಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯ ಚಿತ್ರ ಹಾಗೂ ಸಿನಿಮಾ ನಟರ ಫೋಟೋಗಳು ಮುದ್ರಿತವಾಗಿದ್ದ ಘಟನೆ ಕೂಡ ನಡೆದಿತ್ತು.

