“ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೆಎಸ್‍ಆರ್‌ಟಿಸಿ ಬಸ್ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಿ ಬಸ್ ನಿಯೋಜಿಸಬೇಕು” ಎಂದು ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಸಂಬಂಧ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಭೆಯನ್ನು ಅವರು ನಡೆಸಿದರು. “ಬಸ್ ಸೌಕರ್ಯಕ್ಕಾಗಿ ಜನರು ಹಾಗೂ ಕಾಲೇಜುಗಳ ಪ್ರಾಚಾರ್ಯರು ಮನವಿ ಮಾಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದರು.
ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ಕೆಎಸ್‍ಆರ್‌ಟಿಸಿ ವಿಭಾಗೀಯ ಕಚೇರಿ ಇದೆ. ಆದರೆ ಮಡಿಕೇರಿಯಲ್ಲಿ ವಿಭಾಗೀಯ ಕೇಂದ್ರ ಇಲ್ಲದಿರುವುದು ನೋವಿನ ಸಂಗತಿ. ಆದ್ದರಿಂದ ಈ ಕಚೇರಿ ತೆರೆಯಬೇಕು. ಇದರಿಂದ ಸರ್ಕಾರಿ ಬಸ್‍ಗಳ ನಿಯೋಜನೆಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಕೆಎಸ್‍ಆರ್‌ಟಿಸಿ ಘಟಕ ವ್ಯವಸ್ಥಾಪಕ ಈರಸಪ್ಪ ಮಾತನಾಡಿ, “ಸಾರ್ವಜನಿಕರ ಮನವಿ ಮೇರೆಗೆ ಹಲವು ಕಡೆಗಳಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಹಲವು ಗ್ರಾಮಗಳಿಗೆ ಬೇಡಿಕೆ ಇದೆ” ಎಂದು ಹೇಳಿದರು.
ಈ ಹಿಂದೆ ಕೋಲಾರ ಜಿಲ್ಲೆಯ ಕೆಜಿಎಫ್‍ಗೆ ಕೆಎಸ್‍ಆರ್‌ಟಿಸಿ ಬಸ್ ಸಂಚಾರವಿತ್ತು, ಕಳೆದ ಹಲವು ತಿಂಗಳಿನಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಆದ್ದರಿಂದ ಈ ಬಸ್ಸು ಮಾರ್ಗವನ್ನು ಮುಂದುವರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ, “ಗೋಣಿಕೊಪ್ಪದಲ್ಲಿ ಸರ್ಕಾರಿ ಬಸ್ ಇಲ್ಲದೆ ಪ್ರತಿನಿತ್ಯ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಭಾನುವಾರ ಅಂತು ಬಸ್‍ಗಳು ಕಡಿಮೆ ಇರುತ್ತದೆ. ಆದ್ದರಿಂದ ಹೆಚ್ಚಿನ ಬಸ್‍ಗಳನ್ನು ಓಡಿಸಬೇಕು” ಎಂದು ಮನವಿ ಮಾಡಿದರು.
ಕೆಎಸ್‍ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಈರಸಪ್ಪ ಮಾತನಾಡಿ, “ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗ ಮೈಸೂರುಗೆ ಅರ್ಧ ಗಂಟೆಗೊಮ್ಮೆ ಬಸ್ ಸಂಚರಿಸುತ್ತಿದೆ. ಆದರೂ ಪರಿಶೀಲಿಸಿ ಕ್ರಮವಹಿಸಲಾಗುವುದು” ಎಂದು ಹೇಳಿದರು.

