ತುಮಕೂರು: ವೈದ್ಯಕೀಯ ವಿದ್ಯಾರ್ಥಿಗಳು ಧರಿಸುವ ಬಿಳಿ ಕೋಟ್ ಕೇವಲ ವೈದ್ಯಕೀಯ ವೃತ್ತಿಗೆ ಕಾಲಿಡುತ್ತಿರುವ ಸಂಕೇತವಲ್ಲ. ಅದು ಜವಾಬ್ದಾರಿ. ಮಾನವೀಯತೆ ಹಾಗೂ ಸಮಾಜ ಸೇವೆಯ ಬದ್ಧತೆಯ ಸಂಕೇತವಾಗಿದೆ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ. ಗಂಗಾದರಯ್ಯ ಮೆಮೋರಿಯಲ್ ಹಾಲ್ನಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಲಯದ ವ್ಯಾಪ್ತಿಯ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡೆಂಟಲ್ ಕಾಲೇಜು ಹಾಗೂ ನೆಲಮಂಗಲದ ಶ್ರೀ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ನ 2026-27ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ʼವೈಟ್ ಕೋಟ್ ಧಾರಣೆ ಮತ್ತು ಪ್ರಮಾಣ ವಚನʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂತಹ ಶ್ರೇಷ್ಠ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಎಲ್ಲ ನೂತನ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಶೈಕ್ಷಣಿಕ ಪಯಣ ಯಶಸ್ವಿಯಾಗಲಿ ಹಾಗೂ ಮುಂದಿನ ವೃತ್ತಿಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿ ಬೆಳೆದಿದ್ದು, ಪ್ರತಿವರ್ಷ ಸುಮಾರು 15,000 ವೈದ್ಯರು ಹೊರಬರುತ್ತಿದ್ದಾರೆ. ಆದರೆ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಯೂ ಪಡೆಯುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ 1959ರಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ತಮ್ಮ ತಂದೆ ದಿವಂಗತ ಎಚ್. ಎಂ. ಗಂಗಾಧರಯ್ಯ ಅವರನ್ನು ಸ್ಮರಿಸಿದ ಡಿಸಿಎಂ, ಭಗವಾನ್ ಬುದ್ಧನ ತತ್ವಗಳಿಂದ ಪ್ರೇರಿತರಾಗಿದ್ದ ಅವರು, ಜನರ ಬದುಕನ್ನು ಸುಧಾರಿಸಲು ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಅಗತ್ಯವೆಂದು ನಂಬಿದ್ದರು. ಅವರ ಈ ಆಶಯದಂತೆ ಸ್ಥಾಪನೆಯಾದ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಇದುವರೆಗೆ 40,000ಕ್ಕೂ ಹೆಚ್ಚು ಎಂಜಿನಿಯರ್ ಗಳು ಹಾಗೂ 10,000ಕ್ಕೂ ಹೆಚ್ಚು ವೈದ್ಯರು ಶಿಕ್ಷಣ ಪಡೆದು ಹೊರಬಂದಿದ್ದಾರೆ. ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಅವರ ಕನಸನ್ನು ನಮ್ಮ ಸಂಸ್ಥೆಗಳು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿವೆ ಎಂದರು.
ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಕುಲಾಧಿಪತಿಯಾಗಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಕಲಿಕಾ ಅವಕಾಶಗಳು ಹಾಗೂ ಪೂರಕ ಶೈಕ್ಷಣಿಕ ವಾತಾವರಣವನ್ನು ಒದಗಿಸಲು ನಮ್ಮ ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ಬದ್ಧರಾಗಿದ್ದಾರೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನೀಡಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಅವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಉತ್ತಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ಮಾನವೀಯ ಕಾಳಜಿಯುಳ್ಳ ವೈದ್ಯರನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ, ಡಾ. ಜಿ. ಎಸ್. ಆನಂದ್, ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ, ರಿಜಿಸ್ಟ್ರಾರ್ ಡಾ. ಅಶೋಕ್ ಮೆಹ್ತಾ, ಪರೀಕ್ಷಾಂಗ ನಿಯಂತ್ರಕ ಡಾ. ಸುನಿಲ್, ಪ್ರಾಂಶುಪಾಲರಾದ ಡಾ. ಎಂ. ಬಿ. ಸಾಣಿಕೊಪ್ಪ, ಡಾ. ದಿವಾಕರ್, ಡಾ. ಪ್ರವೀಣ್ ಬಿ. ಕುಡುವಾ, ಉಪಪ್ರಾಂಶುಪಾಲರಾದ ಡಾ. ಪ್ರಭಾಕರ್ ಸೇರಿದಂತೆ ಸಮೂಹ ಸಂಸ್ಥೆಗಳ ವಿವಿಧ ಪ್ರಾಂಶುಪಾಲರು ಉಪಸ್ಥಿತರಿದ್ದರು.

