ಲಾಹೋರ್: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟವನ್ನು ಉದಾಹರಿಸುವ ಮೂಲಕ ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ವಾಸಿಮ್ ಅಕ್ರಮ ತಮ್ಮದೇ ದೇಶದ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಹೋರ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಾಜಿ ನಾಯಕ ಅಕ್ರಮ, ಪಿಎಸ್‌ಎಲ್ ಲೀಗ್ ಪ್ರಾರಂಭವಾಗಿ ಒಂದು ದಶಕವೇ ಕಳೆದರೂ ಒಬ್ಬನೇ ಒಬ್ಬ ದರ್ಜೆಯ ಯುವ ಬ್ಯಾಟರ್‌ನನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತರಬೇತುದಾರರಾಗಿ ಸುದೀರ್ಘ ಅನುಭವ ಹೊಂದಿರುವ ಅವರು, ಪಾಕಿಸ್ತಾನ ಲೀಗ್ ಕೆಲ ಉತ್ತಮ ಬೌಲರ್‌ಗಳನ್ನು ನೀಡಿದೆಯಾದರೂ ಬ್ಯಾಟಿಂಗ್ ವಿಭಾಗದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂದಿದ್ದಾರೆ.
ಐಪಿಎಲ್ ಮೂಲಕ ಬೆಳಕಿಗೆ ಬಂದಿರುವ 15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಯಿಂದ ಜಾಗತಿಕ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ. ಈ ಯುವ ಆಟಗಾರ ಅಂತಾರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನು ಎದುರಿಸುತ್ತಿರುವ ರೀತಿ ಅಭೂತಪೂರ್ವವಾಗಿದೆ. ಭಾರತದಲ್ಲಿ ಇಂತಹ ಅಪರೂಪದ ಪ್ರತಿಭೆಗಳು ಬೆಳೆದುಬರುತ್ತಿರುವಾಗ, ಪಾಕಿಸ್ತಾನದಲ್ಲಿ ಇಂತಹ ಕನಿಷ್ಠ ಒಬ್ಬ ಆಟಗಾರನೂ ಏಕಿಲ್ಲ ಎಂದು ಅಕ್ರಮ ಪ್ರಶ್ನಿಸಿದ್ದಾರೆ.
ಭಾರತದಲ್ಲಿ 14 ಅಥವಾ 15 ವರ್ಷದ ಸೂರ್ಯವಂಶಿಯಂತಹ ಅದ್ಭುತ ಬ್ಯಾಟಿಂಗ್ ಪ್ರತಿಭೆಗಳು ಹೊರಹೊಮ್ಮಿದಾಗ ಮಾತ್ರ ಕ್ರಿಕೆಟ್ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಲು ಸಾಧ್ಯ. ಆದರೆ ನಮ್ಮ ಪಿಎಸ್‌ಎಲ್ ಆರಂಭವಾಗಿ 10 ವರ್ಷಗಳಾಗಿದ್ದರೂ ಅಂತಹ ಒಬ್ಬ ಬ್ಯಾಟರ್ ಅನ್ನು ಸೃಷ್ಟಿಸಲು ಲೀಗ್ ವಿಫಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೇವಲ ಟಿ20 ಲೀಗ್‌ಗಳನ್ನು ನೆಚ್ಚಿಕೊಳ್ಳದೆ ದೇಶಿಯ ಮಟ್ಟದಲ್ಲಿ ಕ್ಲಬ್ ಕ್ರಿಕೆಟ್ ಅನ್ನು ಪುನರುಜ್ಜೀವನಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸುಧಾರಣೆ ಕಾಣಬೇಕಾದರೆ ಕರಾಚಿ ಮತ್ತು ಲಾಹೋರ್‌ನಂತಹ ನಗರಗಳಲ್ಲಿ ಕ್ಲಬ್ ಕ್ರಿಕೆಟ್‌ಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಬೇಕು. ಏಕೆಂದರೆ ನಿಜವಾದ ಪ್ರತಿಭೆಗಳು ಹೊರಬರುವುದೇ ಮೂಲಭೂತ ಕ್ಲಬ್ ಮಟ್ಟದಿಂದ ಎಂದು ಅವರು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ವಿಭಾಗವು ನಿರಂತರವಾಗಿ ವೈಫಲ್ಯ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ ಅವರ ಈ ಹೇಳಿಕೆ ಪಾಕಿಸ್ತಾನ್ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

