ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾಂದ ಶ್ರೀಗಳನ್ನು ಪಂಚಮಸಾಲಿ ಟ್ರಸ್ಟ್ ನವರು ಉಚ್ಛಾಟನೆ ಮಾಡಿದ್ದರೂ, ಸ್ವಾಮೀಜಿಗಳು ಮಠದಲ್ಲಿಯೇ ಇದ್ದಾರೆ. ಇದರಿಂದಾಗಿ ಟ್ರಸ್ಟ್ ಸ್ವಾಮೀಜಿ ವಿರುದ್ಧ ಮತ್ತೊಂದು ಹೋರಾಟಕ್ಕೆ ಮುಂದಾಗಿದೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರಿಹರದ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಿದ್ದೇವೆ. ಆಡಳಿತಾಧಿಕಾರಿ ರಾಜಕುಮಾರ್, ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರನ್ನು ಕೂಡ ಅಮಾನತು ಮಾಡಿದ್ದೇವೆ. ಅವರಾಗಿಯೇ ಗೌರವದಿಂದ ಮಠ ತೊರೆಯಲಿ. ಇಲ್ಲದಿದ್ದರೆ ಟ್ರಸ್ಟ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇನ್ನು ಏಪ್ರಿಲ್ 27ರಂದು ಹರಿಹರ ಮಠದಲ್ಲೇ ಲೆಕ್ಕ ಕೊಡಲು ಮುಂದಾಗಿದ್ದೇವೆ. 2008ರಿಂದ 2026ರವರೆಗೆ ಲೆಕ್ಕ ಕೊಡುತ್ತೇವೆ. ಸಂಘ ಬೇರೆ, ಟ್ರಸ್ಟ್ ಬೇರೆ ಇದೆ. ನಾವು ಬ್ಯಾಲೆನ್ಸ್ ಶೀಟ್ ಕೊಡ್ತಾ ಬರುತ್ತಿದ್ದೇವೆ. ಆದರೆ, ವಚನಾಂದ ಶ್ರೀ ಹಾಗೂ ಹಲವರು ದಿಕ್ಕು ತಪ್ಪಿಸುವ ಸಲುವಾಗಿ ಲೆಕ್ಕ ಕೊಡಿ ಎಂಬ ಅಭಿಯಾನ ನಡೆಸಿದ್ದಾರೆ ಎಂದರು.
ಯಾವುದೇ ಟ್ರಸ್ಟ್ನಲ್ಲಿ ಲೆಕ್ಕ ಕೊಡುವ ಪದ್ಧತಿ ಇಲ್ಲ. ಆದರೂ ಸಹ ಪೈಸೆ ಪೈಸೆ ಲೆಕ್ಕ ಕೊಡಲು ಮುಂದಾಗಿದ್ದೇವೆ. ಲೆಕ್ಕದ ವಿಚಾರವಾಗಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಹೀಗಾಗಿ ಪೀಠದ ಹುಟ್ಟಿನಿಂದ ಇಲ್ಲಿಯವರೆಗೆ ಲೆಕ್ಕ ಕೊಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಟ್ರಸ್ಟಿ ಚಂದ್ರಶೇಖರ್ ಪೂಜಾರ್, ಆದಷ್ಟು ಬೇಗ ಸ್ವಾಮೀಜಿ ಮಠದಿಂದ ಹೋಗಬೇಕು. ಉಚ್ಛಾಟನೆಯ ಹಿನ್ನೆಲೆಯಲ್ಲಿ ಸ್ವಾಮೀಜಿ ಹಕ್ಕು ಕಳೆದುಕೊಂಡಿದ್ದಾರೆ. ಹತ್ತು ದಿನಗಳಾದರೂ ನಿರ್ಗಮಿಸಿಲ್ಲ. ಪದೇ ಪದೇ ಮೀಟಿಂಗ್ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾಳೆ ಬಸವ ಜಯಂತಿ ಮಾಡುತ್ತೇವೆ ಎಂದಿದ್ದಾರೆ. ಪದಚ್ಯುತಿ ಆದವರು ಕಾರ್ಯಕ್ರಮ ಮಾಡಬಾರದು. ಸ್ವಾಮೀಜಿಯನ್ನು ತಿದ್ದಬೇಕು ಅಂತಾ ಹೊರಟಿದ್ದೆವು. ಆದರೆ ಲೆಕ್ಕಪತ್ರ ಚಳುವಳಿ ಹುಟ್ಟು ಹಾಕಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಉಮಾಪತಿ ಅವರ ನೇತೃತ್ವದಲ್ಲಿ ಲೆಕ್ಕ ಕೊಡುವ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ಎಂದರು.
ಸುದ್ದಿಗೋಷ್ಠಿ ಬಳಿಕ ಸ್ವಾಮೀಜಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದರು. ಉಚ್ಛಾಟನೆ ಬಳಿಕವೂ ಸ್ವಾಮೀಜಿ ಮಠದಲ್ಲೇ ಇದ್ದು, ಸುದ್ದಿಗೋಷ್ಠಿಯಲ್ಲಿ ಮನಬಂದಂತೆ ಮಾತನಾಡುತ್ತಿದ್ದಾರೆ. ಏ. 24ರಂದು ಮಠದಲ್ಲಿ ಬಸವ ಜಯಂತಿ ಆಚರಿಸಲು ಮುಂದಾಗಿದ್ದಾರೆ. ಇದು ಸರಿಯಲ್ಲ. ಅಂದು ಯಾವುದೇ ಅಹಿತಕರ ಘಟನೆಗಳು ನಡೆದರೆ, ಆಸ್ತಿಪಾಸ್ತಿಗೆ ಹಾನಿಯಾದರೆ ಉಸ್ತುವಾರಿ ಡಾ.ರಾಜಕುಮಾರ ಹಾಗೂ ಲೆಕ್ಕ ಕೊಡಿ ಅಭಿಯಾನದ ಅಧ್ಯಕ್ಷ ಸಿರಿಗೆರೆ ಪರಮೇಶ್ವರ ಗೌಡ ಅವರೇ ಕಾರಣರಾಗುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

