ಮೈಸೂರು: ಇತ್ತೀಚಿನ ದಿನಗಳಲ್ಲಿ ಕೆಲ ಆಸ್ಪತ್ರೆಗಳ ವಿರುದ್ಧ ವೈದ್ಯರ ನಿರ್ಲಕ್ಷದಿಂದಾಗಿ ರೋಗಿಗಳು, ನವಜಾತ ಶಿಶು, ಬಾಣಂತಿಯರ ಸಾವು ಆರೋಪಗಳು ಕೇಳಿಬರುತ್ತಿವೆ. ಇದೀಗ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಇರುವೆ ಕಚ್ಚ್ಜಿ ಐಸಿಯುನಲ್ಲಿದ್ದ ನವಜಾತ ಶಿಸು ಮೃತಪಟ್ಟಿರುವ ಘಟನೆ ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷದಿಂದಾಗಿಯೇ ಶಿಶುವಿಗೆ ಇರುವೆ ಕಚ್ಚಿ ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
ಅವಧಿ ಪೂರ್ವ ಗಂಡು ಮಗುವೊಂದು ಏಪ್ರಿಲ್ 15ರಂದು ಹುಟ್ಟಿತ್ತು. ಕೇವಲ 7 ತಿಂಗಳಿಗೆ ಮಗು ಜನಿಸಿದ್ದು, ಮಗು 1 ಕೆಜಿ 40 ಗ್ರಾಂ ಮಾತ್ರ ತೂಕ ಹೊಂದಿತ್ತು. ಈ ಹಿನ್ನೆಲೆ ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಇರುವೆ ಕಚ್ಚಿರುವ ಆರೋಪ ಕೇಳಿಬಂದಿದೆ.
ಐಸಿಯುನಲ್ಲಿ ಇರುವೆಗಳಿತ್ತು. ಇಲ್ಲಿ ತುಂಬಾ ಇರುವೆಗಳಿವೆ ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಈ ಮೊದಲೇ ಶಿಶುವಿನ ಪೋಷಕರು ತಿಳಿಸಿದ್ದರಂತೆ ಆದರೆ ಸಿಹಿ ಕಾರಣಕ್ಕೆ ಒಂದೆರಡು ಇರುವೆಗಳು ಬಂದಿವೆ ಎಂದು ವೈದ್ಯರು ಸಮಜಾಯಿಷಿ ನೀಡಿದ್ದರಂತೆ ಆದರೆ ಈಗ ಮಗು ಇರುವೆ ಕಚ್ಚಿ ಸಾವನ್ನಪ್ಪಿದೆ ಎಂದು ಶಿಶುವಿನ ಪೋಷಕರು ಆರೋಪಿಸಿದ್ದಾರೆ.
ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಹಸುಳೆಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಚಲುವಾಂಬಾ ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಈ ಆರೋಪ ಅಲ್ಲಗಳೆದಿದ್ದಾರೆ.
21 ವಾರಕ್ಕೆ ಮಗು ಹುಟ್ಟಿತ್ತು. ಮಗು ಹುಟ್ಟಿದ ವೇಳೆ ಕೇವಲ 1 ಕೆಜಿ ತೂಕವಿತ್ತು. ಮಗು ಅಳುತ್ತಿಲ್ಲ ಎನ್ನುವ ಕಾರಣಕ್ಕೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೆವು. ಐಸಿಯುನಲ್ಲಿ ಚಿಕಿತ್ಸೆ ಹಿನ್ನೆಲೆ ಮಗುವಿನ ಕೈ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಿದ್ದೆವು. ಹೀಗಾಗಿ ಆ ಭಾಗದಲ್ಲಿ ಮಾರ್ಕ್ಗಳು ಉಂಟಾಗಿವೆ. ಕಳೆದ ಒಂದು ವಾರದಿಂದ ಮಗುವಿನ ಜೀವ ಉಳಿಸಲು ಪ್ರಯತ್ನ ಮಾಡಲಾಗಿದೆ. ನಮ್ಮ ಸಿಬ್ಬಂದಿಗಳಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಐಸಿಯುನಲ್ಲಿ ಗ್ಲೂಕೊಸ್ ಇರುವುದರಿಂದ ಒಂದೊಂದು ಇರುವೆ ಇರಬಹುದು. ಆದರೆ ಮಗುವಿನ ಪೋಷಕರು ಹೇಳುವಂತೆ ಇರುವೆ ಕಚ್ಚಿ ಮಗು ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.

