ಇಂದು ( ಏಪ್ರಿಲ್ 23 ) ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವದ ಹಬ್ಬ ಜೋರಾಗಿ ನಡೆದಿದೆ. ದೇಶದ ವಿವಿಧೆಡೆ ನೆಲೆಸಿದ್ದ ತಮಿಳಿಗರು ಮತದಾನ ಮಾಡುವುದಕ್ಕಾಗಿ ತಮ್ಮ ಊರುಗಳಿಗೆ ವಾಪಸ್ಸಾಗಿದ್ದಾರೆ. ವಯಸ್ಸಾದ ವೃದ್ಧರು ಉರಿ ಬಿಸಿಲನ್ನು ಲೆಕ್ಕಿಸದೇ ಮತಗಟ್ಟೆಗಳಿಗೆ ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ನೀಡಿದ್ದಾರೆ.
ಅದೇ ರೀತಿ ಸಮಯಪುರಂನ ವಾರ್ಡ್ ಸಂಖ್ಯೆ 15ರಲ್ಲಿ ವೃದ್ಧೆಯೊಬ್ಬರು ಆಗಮಿಸಿ ಮತ ಚಲಾಯಿಸಲು ಮುಂದಾಗಿದ್ದಾರೆ. ವಯಸ್ಸಾದ ವೃದ್ಧೆಯರು ಕಣ್ಣು ಕಾಣಿಸದ ಸಂದರ್ಭದಲ್ಲಿ ಇತರರ ಸಹಾಯ ಪಡೆದು ಮತ ಹಾಕುವುದನ್ನು ನೋಡಿರುತ್ತೀರ. ಅದೇ ರೀತಿ ಈ ವೃದ್ಧೆಯೂ ಸಹ ಅಲ್ಲಿದ್ದ ಸಿಬ್ಬಂದಿ ಬಳಿ ಟಿವಿಕೆಗೆ ಮತ ಹಾಕಿ ಎಂದು ಮನವಿ ಮಾಡಿದ್ದರಂತೆ.
ಆದರೆ ಅಷ್ಟರಲ್ಲಿ ಅಲ್ಲೇ ಇದ್ದ ಚುನಾವಣಾ ಅಧಿಕಾರಿಯೊಬ್ಬರು ಮೊದಲ ಅಂಕಿಯನ್ನು ಒತ್ತಿ ಡಿಎಂಕೆಗೆ ಮತ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ತನ್ನ ಇಚ್ಛೆಯಂತೆ ಮತ ಹಾಕಿಲ್ಲ ಎಂದು ವೃದ್ಧೆ ಹೇಳಿದ್ದು, ಟಿವಿಕೆ ಬೆಂಬಲಿಗ ಯುವಕನೊಬ್ಬ ಮತಗಟ್ಟೆಗೆ ನುಗ್ಗಿ ಚುನಾವಣಾ ಅಧಿಕಾರಿ ವಿರುದ್ಧ ಕಿಡಿಕಾರಿದ್ದಾನೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಚುನಾವಣಾ ಆಯೋಗ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ವಿಡಿಯೊದಲ್ಲಿ ವೃದ್ಧೆ ಹಾಗೂ ಆ ಯುವಕ ಅಧಿಕಾರಿ ವಿರುದ್ಧ ಆರೋಪಿಸುತ್ತಿದ್ದರೆ, ಇತ್ತ ಅಧಿಕಾರಿ ಅದರಿಂದ ತನಗೇನು ಲಾಭ ತಾನು ತಪ್ಪು ಮಾಡಿಲ್ಲ ಎಂದು ಮರುವಾದಿಸಿದ್ದಾರೆ.

