ಕರ್ನಾಟಕದ ಅವಳಿ ಜಿಲ್ಲೆಗಳಾದ ಬಳ್ಳಾರಿ-ವಿಜಯನಗರಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಬಳ್ಳಾರಿ-ಹೊಸಪೇಟೆ ನಡುವೆ 3ನೇ ಮತ್ತು 4ನೇ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಅನುಮೋದನೆ ಸಿಕ್ಕಿದೆ.
ಇದು ರೈಲು ಕಾರ್ಯಾಚರಣೆಗಳನ್ನು ಹೆಚ್ಚಿಸುತ್ತದೆ ಮತ್ತು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿ ಮತ್ತು ತುಂಗಭದ್ರಾ ಅಣೆಕಟ್ಟು ಸೇರಿದಂತೆ ವಿವಿಧ ಸ್ಥಳಗಳಿಗೆ ಸಂಪರ್ಕ ಸುಧಾರಿಸುತ್ತದೆ.
ಹೊಸಪೇಟೆ ಇಷ್ಟು ದಿನ ಬಳ್ಳಾರಿ ಜಿಲ್ಲೆಯಲ್ಲಿತ್ತು. ಆದರೆ ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ವಿಜಯನಗರಕ್ಕೆ ಹೊಸಪೇಟೆ ಜಿಲ್ಲಾ ಕೇಂದ್ರವಾಗಿದೆ. ಈಗ ಹೊಸಪೇಟೆ-ಬಳ್ಳಾರಿ ನಡುವೆ ಎರಡು ಹೆಚ್ಚುವರಿ ರೈಲು ಮಾರ್ಗಗಳು ನಿರ್ಮಾಣವಾಗಲಿದೆ.
ಈ ರೈಲು ಕಾರಿಡಾರ್ ಬಳ್ಳಾರಿ-ಹೊಸಪೇಟೆ ನಗರದ ಅಭಿವೃದ್ಧಿಗೆ ಸಹಾಯಕವಾಗಲಿದೆ. ಈ ಯೋಜನೆಯ ಅಂದಾಜು ವೆಚ್ಚ 2,372 ಕೋಟಿ ರೂ.ಗಳು. ಒಟ್ಟು 65 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣವಾಗಲಿದೆ.
ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗದಲ್ಲಿ 34 ಪ್ರಮುಖ ಸೇತುವೆ, 220 ಸಣ್ಣ ಸೇತುವೆ, 11ಆರ್‌ಒಬಿ ಮತ್ತು 14 ಆರ್‌ಯುಬಿಗಳು ಬರಲಿವೆ.
ಯುನೆಸ್ಕೋ ಮಾನ್ಯತೆ ಪಡೆದಿರುವ ಹಂಪಿ, ಬಳ್ಳಾರಿ ಕೋಟೆ ಮತ್ತು ತುಂಗಭದ್ರಾ ಡ್ಯಾಂಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಅನುಕೂಲವಾಗಲಿದೆ.

