ನಾಳೆ ( ಫೆಬ್ರವರಿ 15 ) ಕೊಲಂಬೊದ ಪ್ರೇಮದಾಸ ಕ್ರೀಡಾಂಗಣ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟಿ ಟ್ವೆಂಟಿ ವಿಶ್ವಕಪ್ ಮುಖಾಮುಖಿಗೆ ಸಾಕ್ಷಿಯಾಗಲಿದೆ.
ಆರಂಭದಲ್ಲಿ ಭಾರತದ ವಿರುದ್ಧ ಪಂದ್ಯವನ್ನಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಐಸಿಸಿ ಜತೆಗಿನ ಸಭೆಯ ಬಳಿಕ ಪಂದ್ಯವನ್ನಾಡಲು ಸಮ್ಮತಿಸಿತು. ಇನ್ನು ಏಷ್ಯಾ ಕಪ್ ಟೂರ್ನಿಯ ವೇಳೆ ಇತ್ತಂಡಗಳು ಹಸ್ತಲಾಘವ ಮಾಡದೇ ಇದ್ದದ್ದನ್ನು ಈ ಬಾರಿ ಮರುಕಳಿಸಲು ಬಿಡದೇ ಪರಸ್ಪರ ಹಸ್ತಲಾಘವ ಮಾಡಲಿವೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.
ಇನ್ನು ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ್ ಅಬ್ಸರ್ವರ್ ದಿನಪತ್ರಿಕೆ ವರದಿಯೊಂದನ್ನು ಮಾಡಿದ್ದು, ಈ ವರದಿ ಪ್ರಕಾರ ಐಸಿಸಿ ಅಧ್ಯಕ್ಷ ಜಯ್ ಶಾ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಕೊಲಂಬೊಗೆ ಆಗಮಿಸಲಿದ್ದಾರೆ. ಅಲ್ಲದೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ಮೊಹ್ಸಿನ್ ಶಾಗೂ ಸಹ ಪಂದ್ಯ ವೀಕ್ಷಣೆಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಹ್ವಾನಿಸಿದ್ದು, ಜಯ್ ಶಾ ಮತ್ತು ಬಿಸಿಸಿಐನ ಕೆಲ ಸದಸ್ಯರು ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷನ ಜತೆ ಒಟ್ಟಿಗೆ ಪಂದ್ಯ ನೋಡಲಿದ್ದಾರೆ ಎಂದು ಸುದ್ದಿ ಮಾಡಿದೆ.
ಭಾರತ ಹಾಗೂ ಪಾಕ್ ತಂಡಗಳ ನಡುವಿನ ಈ ಪಂದ್ಯ ಎರಡೂ ತಂಡಗಳಿಗೂ ಟೂರ್ನಿಯ ಮೂರನೇ ಪಂದ್ಯವಾಗಿದ್ದು, ಗೆಲುವು ಸಾಧಿಸುವ ತಂಡ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಈ ಪಂದ್ಯ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

