ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಬೆಂಗಳೂರಿಗೆ ಎರಡು ರೈಲು ಬಿಟ್ಟಿದ್ದು ಬಿಟ್ಟರೆ ಬೇರೇನೂ ಘೋಷಿಸಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಯೋಜನೆಯಲ್ಲಿ ನೀಡಿರುವ ಕೊಡುಗೆಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.
ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 2026-27ರ ಕೇಂದ್ರ ಬಜೆಟ್‌ನಲ್ಲಿ 7,748 ಕೋಟಿ ರೂ. ಹಂಚಿಕೆಯಾಗಿದ್ದು, ಇದು ದಾಖಲೆ ಮಟ್ಟದ ಅನುದಾನವಾಗಿದೆ ಎಂದು ಸಚಿವ ವೈಷ್ಣವ್ ತಿಳಿಸಿದ್ದಾರೆ.
ಈ ಬಾರಿ ಕರ್ನಾಟಕಕ್ಕೆ ನೀಡಿರುವುದು ದಾಖಲೆ ಮಟ್ಟದ ಬಜೆಟ್. ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಿದೆ ಎಂದರು. ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 52,950 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಯೋಜನೆಗಳಲ್ಲಿ ಹೊಸ ರೈಲು ಹಳಿಗಳ ನಿರ್ಮಾಣ, ನಿಲ್ದಾಣಗಳ ಸಮಗ್ರ ಪುನರಾಭಿವೃದ್ಧಿ, ಹಾಗೂ ಪ್ರಮುಖ ಸುರಕ್ಷತಾ ನವೀಕರಣಗಳು ಸೇರಿವೆ ಎಂದು ಹೇಳಿದ್ದಾರೆ.
ಹೈಸ್ಪೀಡ್ ರೈಲು
ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ಗಳು ಬೆಂಗಳೂರಿನ ಜನಜೀವನದಲ್ಲಿ ದೊಡ್ಡ ಬದಲಾವಣೆ ಮಾಡಲಿದೆ. ಬೆಂಗಳೂರು–ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 1 ಗಂಟೆ 13 ನಿಮಿಷಗಳಿಗೆ ಇಳಿಯಲಿದ್ದು, ಬೆಂಗಳೂರು–ಹೈದರಾಬಾದ್ ಪ್ರಯಾಣ ಕೇವಲ 2 ಗಂಟೆಗಳಲ್ಲಿ ಸಾಧ್ಯವಾಗಲಿದೆ.
ಅಮೃತ್ ಭಾರತ್ ನಿಲ್ದಾಣ ಯೋಜನೆ
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು 2,110 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಪುನರಾಭಿವೃದ್ಧಿ ಮಾಡಲು ಗುರುತಿಸಲಾಗಿದೆ. ಇವುಗಳಲ್ಲಿ ಬಾಗಲಕೋಟೆ, ಧಾರವಾಡ, ಗದಗ, ಗೋಕಾಕ್ ರಸ್ತೆ ಹಾಗೂ ಮುನಿರಾಬಾದ್ ನಿಲ್ದಾಣಗಳ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಬಾದಾಮಿ, ಅಳ್ನಾವರ, ಕೊಪ್ಪಳ ಮತ್ತು ಬಂಟ್ವಾಳ ನಿಲ್ದಾಣಗಳು ಉದ್ಘಾಟನೆಗಾಗಿ ಸಿದ್ಧವಾಗಿವೆ.
ಕರ್ನಾಟಕದ ರೈಲ್ವೆ ಜಾಲ ವಿಸ್ತರಣೆ
2014ರಿಂದ ಈವರೆಗೆ ರಾಜ್ಯದಲ್ಲಿ ಸುಮಾರು 1,750 ಕಿಲೋಮೀಟರ್ ಹೊಸ ರೈಲು ಹಳಿಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಒಟ್ಟು ರೈಲ್ವೆ ಜಾಲದಲ್ಲಿ 3,368 ರೂಟ್ ಕಿಲೋಮೀಟರ್‌ಗಳಷ್ಟು (ಸುಮಾರು 97%) ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಜೊತೆಗೆ 707 ಫ್ಲೈಓವರ್‌ಗಳು ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು-ಮೈಸೂರು ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲ್
138 ಕಿಮೀ ಉದ್ದದ ಕೆಎಸ್‌ಆರ್ ಬೆಂಗಳೂರು–ಮೈಸೂರು ಮಾರ್ಗದಲ್ಲಿ 72.76 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಈ ಯೋಜನೆಗೆ 2025ರ ಡಿಸೆಂಬರ್ 9 ರಂದು ಸ್ವೀಕೃತಿ ಪತ್ರ ನೀಡಲಾಗಿದೆ.
ಹೊಸ ಮಾರ್ಗಗಳು, ಜೋಡಿ ಹಳಿಗಳು
ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ 3,085 ಕೋಟಿ ರೂ. ಹಾಗೂ ಜೋಡಿ ಹಳಿಗಳ ನಿರ್ಮಾಣಕ್ಕೆ 1,534 ಕೋಟಿ ರೂ. ಮೊತ್ತವನ್ನು ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

