ಹೈದರಾಬಾದ್/ ನಾರಾಯಣಗುಡ: ಮಾವಿನಹಣ್ಣು ತಿಂದ ನಂತರ ಅನಾರೋಗ್ಯಕ್ಕೀಡಾಗಿ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದಾರೆ. ಈ ಘಟನೆ ಹೈದರಾಬಾದ್ನ ನಾರಾಯಣಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಅಕ್ಕ ಭುವನೇಶ್ವರಿ (17) ಸಾವನ್ನಪ್ಪಿದರೆ, ಮಂಗಳವಾರ ಚಿಕಿತ್ಸೆ ಪಡೆಯುತ್ತಿದ್ದ ತಂಗಿ ಸಂಧ್ಯಾ (10) ಮೃತಪಟ್ಟಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕರ್ನಾಟಕದ ಬೀದರ್ ಜಿಲ್ಲೆಯ ವೈಜಿನಾಥ್ ಮತ್ತು ಇಂದುಮತಿ ದಂಪತಿ ಬದುಕು ಅರಸಿ ಹೈದರಾಬಾದ್ಗೆ ಬಂದು ವಿಠಲ್ ವಾಡಿಯಲ್ಲಿ ನೆಲೆಸಿದ್ದರು.
ಇತ್ತೀಚೆಗೆ ಅವರ ಸಂಬಂಧಿ ರೇಣುಕಾ ಎಂಬುವವರು ಮನೆಗೆ ಬರುವಾಗ ನಾರಾಯಣಗುಡ ಜಲಮಂಡಳಿ ಸಮೀಪ ಮಾವಿನಹಣ್ಣುಗಳನ್ನು ಖರೀದಿಸಿದ್ದರು. ಆ ಹಣ್ಣುಗಳನ್ನು ತಂದು ವೈಜಿನಾಥ್ ಅವರ ಮನೆಯಲ್ಲಿ ಕೊಟ್ಟಿದ್ದರು. ಆ ಹಣ್ಣುಗಳನ್ನು ಇಂದುಮತಿ ಮತ್ತು ಅವರ ನಾಲ್ವರು ಹೆಣ್ಣುಮಕ್ಕಳು ತಿಂದಿದ್ದರು. ಭಾನುವಾರ ಸಂಜೆ ಹಣ್ಣು ತಿಂದ ಐವರಿಗೂ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದರಿಂದ, ಅವರನ್ನು ಕಾಚಿಗೂಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ವೈಜಿನಾಥ್ ಅವರ ಮೂರನೇ ಮಗಳು ಭುವನೇಶ್ವರಿ (17) ಸೋಮವಾರ ಮೃತಪಟ್ಟಳು.
ನಂತರ ಮಂಗಳವಾರ ಆಕೆಯ ತಂಗಿ ಸಂಧ್ಯಾ (10) ಕೂಡ ಪ್ರಾಣ ಕಳೆದುಕೊಂಡಳು. ತಾಯಿ ಮತ್ತು ಇನ್ನಿಬ್ಬರು ಹೆಣ್ಣುಮಕ್ಕಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಧ್ಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಎಲ್ಲಾ ಕೋನಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಸಾಂದರ್ಭಿಕ AI ಚಿತ್ರ

