ಪ್ರತಿದಿನ ಕೆಲಸಕ್ಕೆ ಹೋಗಲು, ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ಅಗತ್ಯ ಕೆಲಸಗಳಿಗಾಗಿ ಹಳೆಯ ಬೈಕ್, ಕಾರುಗಳನ್ನು ಅವಲಂಬಿಸಿರುವ ವಾಹನ ಸವಾರರಿಗೆ ಈಗ ಹೊಸ ಆತಂಕ ಎದುರಾಗಿದೆ. ವಾಹನ ತೆಗೆದುಕೊಂಡು ರಸ್ತೆಗೆ ಹೊರಡುವ ಮುನ್ನ ಅದು BS-3 ಅಥವಾ BS-4 ಮಾದರಿಯದ್ದೇ ಎಂದು ಪರೀಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೋಯ್ಡಾ ಅಧಿಕಾರಿಗಳು ಸಂಚಾರ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ.
ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ನೋಯ್ಡಾದಲ್ಲಿ ಗ್ರಾಪ್-3 (GRAP-III) ನಿಯಮಗಳನ್ನು ಜಾರಿಗೊಳಿಸಲಾಗಿದ್ದು, BS-3 ಮತ್ತು BS-4 ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಹೀಗಾಗಿ ಹಳೆಯ ಬೈಕ್ ಅಥವಾ ಕಾರು ಹೊಂದಿರುವವರು ನೋಯ್ಡಾ ರಸ್ತೆಗೆ ತೆರಳುವ ಮುನ್ನ ತಮ್ಮ ವಾಹನದ ಎಮಿಷನ್ ಮಾನದಂಡವನ್ನು ಪರಿಶೀಲಿಸಿಕೊಳ್ಳುವುದು ಅನಿವಾರ್ಯವಾಗಿದೆ. ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿಯಾಗುವ ಆತಂಕವೂ ಇದೆ.
ಬರೋಬ್ಬರಿ 1.5 ಲಕ್ಷ ವಾಹನಗಳಿಗೆ ಸಂಕಷ್ಟ!
ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ಸೈಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಗೌತಮ್ ಬುದ್ಧ ನಗರದಲ್ಲಿ ಸುಮಾರು 1 ಲಕ್ಷ BS-4 ವಾಹನಗಳು ಹಾಗೂ 51 ಸಾವಿರಕ್ಕೂ ಅಧಿಕ BS-3 ವಾಹನಗಳು ನೋಂದಣಿಯಾಗಿವೆ. ಅಂದರೆ, ಈ ಹೊಸ ನಿರ್ಬಂಧದಿಂದ ಸುಮಾರು 1.5 ಲಕ್ಷ ವಾಹನಗಳ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.
ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಹದ್ದಿನ ಕಣ್ಣು
ನಿತ್ಯದ ಕೆಲಸ ಕಾರ್ಯಗಳಿಗಾಗಿ ಬೇರೆ ಬೇರೆ ನಗರಗಳಿಂದ ನೋಯ್ಡಾಕ್ಕೆ ಬರುವ ವಾಹನ ಸವಾರರಿಗೂ ಈ ನಿರ್ಬಂಧ ಬಿಸಿ ತಟ್ಟಲಿದೆ. ನಿಯಮ ಉಲ್ಲಂಘಿಸುವ ವಾಹನಗಳನ್ನು ತಡೆಯಲು ಪೊಲೀಸರು ಪ್ರಮುಖ ಗಡಿ ಪ್ರದೇಶಗಳಲ್ಲಿ 24 ಗಂಟೆಗಳ ನಿಗಾ ಇರಿಸಿದ್ದಾರೆ.
ಜೆವರ್ ಟೋಲ್ ಪ್ಲಾಜಾ, ಜೀರೋ ಪಾಯಿಂಟ್, ಪರಿ ಚೌಕ್, ಚಿಲ್ಲಾ ಗಡಿ ಹಾಗೂ ಡಿಎನ್‌ಡಿ ಫ್ಲೈವೇ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕಾಲಿಂದಿ ಕುಂಜ್, ನ್ಯೂ ಅಶೋಕ್ ನಗರ ಮತ್ತು ಕೊಂಡ್ಲಿ ಗಡಿ ಮಾರ್ಗಗಳಲ್ಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.
ಪದೇ ಪದೇ ತಪ್ಪು ಮಾಡಿದರೆ ವಾಹನವೇ ಸೀಜ್!
ಸದ್ಯ ನಿಷೇಧಿತ ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ಪರಿಶೀಲಿಸಿದ ಬಳಿಕ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ. ಆದರೆ ಇದೇ ತಪ್ಪನ್ನು ಪದೇ ಪದೇ ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಡಿಸಿಪಿ ಎಚ್ಚರಿಕೆ ನೀಡಿದ್ದಾರೆ.
ದೆಹಲಿಗೆ ಹೋಗುವವರಿಗೂ ಹೊಸ ನಿಯಮದ ಬಿಸಿ
ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವ ವಾಹನ ಸವಾರರು ಕೂಡ ಎಚ್ಚರಿಕೆ ವಹಿಸಬೇಕಿದೆ. ಪರಿಷ್ಕೃತ ಗ್ರಾಪ್ ನಿಯಮಗಳು ಮತ್ತು ದೆಹಲಿ ಸರ್ಕಾರದ ಪರಿಸರ ಇಲಾಖೆಯ ಅಧಿಸೂಚನೆಯ ಪ್ರಕಾರ, BS-6ಕ್ಕಿಂತ ಕಡಿಮೆ ಎಮಿಷನ್ ಮಾನದಂಡ ಹೊಂದಿರುವ ವಾಹನಗಳ ದೆಹಲಿ ಪ್ರವೇಶಕ್ಕೆ ನಿರ್ಬಂಧವಿದೆ.
BS-6 ವಾಹನಗಳ ಜೊತೆಗೆ ನಿಯಮಾನುಸಾರ CNG, ಎಲೆಕ್ಟ್ರಿಕ್ (EV) ಮತ್ತು LNG ವಾಹನಗಳಿಗೆ ಮಾತ್ರ ವಿನಾಯಿತಿಯೊಂದಿಗೆ ಪ್ರವೇಶಕ್ಕೆ ಅವಕಾಶವಿದೆ. ಇತರ ರಾಜ್ಯಗಳಿಂದ ಬರುವ BS-6ಕ್ಕಿಂತ ಕಡಿಮೆ ಮಾನದಂಡದ ಡೀಸೆಲ್ ಬಸ್‌ಗಳಿಗೂ ದೆಹಲಿಯಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ಹೀಗಾಗಿ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಹನ ಚಲಾಯಿಸುವವರು ಪ್ರಯಾಣಕ್ಕೂ ಮುನ್ನ ತಮ್ಮ ವಾಹನದ ಎಮಿಷನ್ ಮಾನದಂಡ ಹಾಗೂ ಜಾರಿಯಲ್ಲಿರುವ ಸಂಚಾರ ನಿರ್ಬಂಧಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಸೂಚನೆ: ಈ ನಿರ್ಬಂಧಗಳು ದೆಹಲಿ-ಎನ್‌ಸಿಆರ್ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳಿಗೆ ಸಂಬಂಧಿಸಿವೆ. ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸಿ ಪ್ರಯಾಣಿಸುವುದು ಸೂಕ್ತ.

