ಮುಂಬೈ: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಟಗಾರರ ಟ್ರೇಡ್ಗಳಲ್ಲಿ ಒಂದಾಗಿರುವ ಬೃಹತ್ ಒಪ್ಪಂದದ ಮುಖಾಂತರ ಮುಂಬೈ ಇಂಡಿಯನ್ಸ್ (ಎಂಐ) ತಂಡವು ಭಾರತದ ತಾರಾ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಅಧಿಕೃತವಾಗಿ ತಂಡಕ್ಕೆ ಬರಮಾಡಿಕೊಂಡಿದೆ. ಇದೇ ವೇಳೆ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಕ್ಕೆ ನಿರ್ಗಮಿಸುತ್ತಿರುವ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಫ್ರಾಂಚೈಸಿ ಭಾವನಾತ್ಮಕ ಬೀಳ್ಕೊಡುಗೆ ನೀಡಿದೆ.
ಈ ಬೃಹತ್ ಆಟಗಾರರ ಅದಲು-ಬದಲು ಪ್ರಕ್ರಿಯೆಯಲ್ಲಿ ಹಾರ್ದಿಕ್ ಪಾಂಡ್ಯ 18 ಕೋಟಿ ರೂಪಾಯಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲಿದ್ದರೆ, ಭಾರತ ಟಿ20 ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ 18 ಕೋಟಿ ರೂಪಾಯಿ ಬೆಲೆಗೆ ಮುಂಬೈ ಇಂಡಿಯನ್ಸ್ ಬಳಗವನ್ನು ಸೇರಿಕೊಂಡಿದ್ದಾರೆ.
ಅರ್ಷದೀಪ್ ಸಿಂಗ್ ಎಂಟ್ರಿಯನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮುಂಬೈ ಇಂಡಿಯನ್ಸ್, ಎಡಗೈ ವೇಗಿಯ ಈ ಸೇರ್ಪಡೆಯು ತಂಡದ ಬೌಲಿಂಗ್ ವಿಭಾಗಕ್ಕೆ ಬೆಂಕಿ ಮತ್ತು ಮಂಜಿನ ಸಂಯೋಜನೆಯಂತಾಗಲಿದೆ ಎಂದು ಬರೆದುಕೊಂಡಿದೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ನೀಡಿದ ಕೊಡುಗೆಯನ್ನು ಸ್ಮರಿಸಿರುವ ಮುಂಬೈ, ಎಲ್ಲಾ ಸವಾಲುಗಳ ನಡುವೆಯೂ ಮುಂಬೈ ಇಂಡಿಯನ್ಸ್ ಪಯಣದ ಭಾಗವಾಗಿದ್ದಕ್ಕೆ ಧನ್ಯವಾದಗಳು ಎಂದು ವೀಡಿಯೊ ಪೋಸ್ಟ್ ಮಾಡಿದೆ.
2015ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್ ಅಂಗಳಕ್ಕೆ ಪ್ರವೇಶಿಸಿದ್ದ ಹಾರ್ದಿಕ್, 2015, 2017, 2019 ಮತ್ತು 2020ರ ಚಾಂಪಿಯನ್ ಪಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಗುಜರಾತ್ ಟೈಟನ್ಸ್ ನಾಯಕರಾಗಿ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದ ಅವರು 2024ರಲ್ಲಿ ಮರಳಿ ಮುಂಬೈ ನಾಯಕತ್ವ ವಹಿಸಿಕೊಂಡಿದ್ದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 162 ಪಂದ್ಯಗಳಿಂದ 2,955 ರನ್ ಹಾಗೂ 82 ವಿಕೆಟ್ ಪಡೆದಿರುವ ಹಾರ್ದಿಕ್, ಮುಂಬೈ ತಂಡದಲ್ಲಿನ ತಮ್ಮ ಎರಡನೇ ಇನ್ನಿಂಗ್ಸ್ನಲ್ಲಿ ಕೊಂಚ ಮಂಕಾಗಿದ್ದರು.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಪರ 96 ಪಂದ್ಯಗಳಲ್ಲಿ 111 ವಿಕೆಟ್ ಪಡೆದು ಆ ತಂಡದ ಸಾರ್ವಕಾಲಿಕ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದ ಅರ್ಷದೀಪ್ ಸಿಂಗ್, ಹೊಸ ಚೆಂಡಿನಲ್ಲೂ ಮತ್ತು ಡೆತ್ ಓವರ್ಗಳಲ್ಲೂ ವಿಕೆಟ್ ಕಬಳಿಸುವ ಶಕ್ತಿ ಹೊಂದಿದ್ದಾರೆ. ಅರ್ಷದೀಪ್ ಅವರ ಸೇರ್ಪಡೆಯು ಮುಂಬೈ ಇಂಡಿಯನ್ಸ್ ಬೌಲಿಂಗ್ ಪಡೆಗೆ ಬಲಿಷ್ಠ ಶಕ್ತಿಯನ್ನು ತಂದಿತ್ತಿದೆ.

