HomeLatest Newsಸಚಿನ್ ತೆಂಡೂಲ್ಕರ್ ವೃತ್ತಿಜೀವನದ ಅಪರೂಪದ ನೆನಪುಗಳ ಅನಾವರಣ: ಮುಂಬೈನಲ್ಲಿ ಶುರುವಾಗಲಿದೆ 'ಬ್ಯಾಟೋಗ್ರಫಿ' ಪ್ರದರ್ಶನ

ಸಚಿನ್ ತೆಂಡೂಲ್ಕರ್ ವೃತ್ತಿಜೀವನದ ಅಪರೂಪದ ನೆನಪುಗಳ ಅನಾವರಣ: ಮುಂಬೈನಲ್ಲಿ ಶುರುವಾಗಲಿದೆ ‘ಬ್ಯಾಟೋಗ್ರಫಿ’ ಪ್ರದರ್ಶನ

ಮುಂಬೈ: ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ಪರಂಪರೆಗೆ ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಿದ್ದು, ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ ಅಪರೂಪದ ಹಾಗೂ ಪ್ರಮುಖ ಕ್ರಿಕೆಟ್ ಸ್ಮರಣಿಕೆಗಳನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ (ಎಂಸಿಎ) ಶರದ್ ಪವಾರ್ ಕ್ರಿಕೆಟ್ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಿದ್ದಾರೆ. ಇದರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಲು ಬಳಸಿದ ಪ್ರಸಿದ್ಧ ಬ್ಯಾಟ್‌ಗಳು ಕೂಡ ಸೇರಿವೆ.

ಈ ವಿಶೇಷ ವಸ್ತುಗಳ ಪ್ರದರ್ಶನವನ್ನು ನವೆಂಬರ್ 16, 2026 ರಂದು ಅದ್ಧೂರಿಯಾಗಿ ಅನಾವರಣಗೊಳಿಸಲಾಗುವುದು. 13 ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 16ರಂದು ಸಚಿನ್ ತೆಂಡೂಲ್ಕರ್ ತಮ್ಮ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ 200ನೇ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ದಿನದ ಸವಿನೆನಪಿಗಾಗಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಮ್ಯೂಸಿಯಂನಲ್ಲಿ ‘ಬ್ಯಾಟೋಗ್ರಫಿ’ ಎಂಬ ವಿನೂತನ ಶೀರ್ಷಿಕೆಯಡಿಯಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಸಚಿನ್ ಅವರ ಕ್ರಿಕೆಟ್ ಪಯಣದ ಪ್ರಮುಖ ಮೈಲಿಗಲ್ಲುಗಳಲ್ಲಿ ಸಾಥ್ ನೀಡಿದ 26 ಬ್ಯಾಟ್‌ಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ. ವ್ಯಕ್ತಿಯ ಜೀವನಾಧಾರಿತ ‘ಬಯೋಗ್ರಫಿ’ ಮಾದರಿಯಲ್ಲೇ, ಬ್ಯಾಟ್‌ಗಳ ಮೂಲಕ ಸಚಿನ್ ಅವರ ಸಂಪೂರ್ಣ ವೃತ್ತಿಜೀವನದ ಕಥೆಯನ್ನು ಅಭಿಮಾನಿಗಳಿಗೆ ತಲುಪಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್, ಸಚಿನ್ ತೆಂಡೂಲ್ಕರ್ ಅವರ ಕೊಡುಗೆ ಕೇವಲ ದಾಖಲೆಗಳಿಗೆ ಸೀಮಿತವಾಗಿಲ್ಲ. ಭಾರತೀಯ ಹಾಗೂ ವಿಶ್ವ ಕ್ರಿಕೆಟ್‌ನ ಲಕ್ಷಾಂತರ ಅಭಿಮಾನಿಗಳ ನೆನಪಿನಲ್ಲಿ ಅವರ ಪಯಣ ಅಚ್ಚಳಿಯದೆ ಉಳಿದಿದೆ. ತಮ್ಮ ಅಪರೂಪದ ನೆನಪಿನ ಬ್ರ್ಯಾಂಡ್‌ಗಳನ್ನು ಸಚಿನ್ ಎಂಸಿಎ ಜೊತೆ ಹಂಚಿಕೊಂಡಿರುವುದು ನಮಗೆ ಸಿಕ್ಕ ಗೌರವ ಎಂದು ತಿಳಿಸಿದ್ದಾರೆ.

ಬ್ಯಾಟ್‌ಗಳ ಜೊತೆಗೆ ಸಚಿನ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಧರಿಸಿದ್ದ ಹೆಲ್ಮೆಟ್, ಜೆರ್ಸಿಗಳು ಹಾಗೂ ಪ್ರಮುಖ ಹಂತಗಳಲ್ಲಿ ಬರೆದಿಟ್ಟ ಟಿಪ್ಪಣಿಗಳನ್ನು ಸಹ ಪ್ರದರ್ಶನಕ್ಕಿಡಲಾಗುತ್ತಿದ್ದು, ಅಭಿಮಾನಿಗಳಿಗೆ ಮಾಸ್ಟರ್ ಬ್ಲಾಸ್ಟರ್ ಅವರ ಸುವರ್ಣ ಯುಗವನ್ನು ಮತ್ತೊಮ್ಮೆ ಕಣ್ಣುಂಬಿಕೊಳ್ಳುವ ಅವಕಾಶ ಸಿಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular