ತುಮಕೂರು: ತುಮಕೂರು ದಸರಾ ಹಬ್ಬದ ಪೂರ್ವ ತಯಾರಿಯಾಗಿ ಎರಡು ಮಹತ್ವದ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದು ತುಮಕೂರಿನ ಅಮಾನಿಕೆರೆಯಲ್ಲಿ ನವೀನ ರೀತಿಯ ತೇಲುವ ‘ಸಂಗೀತ ಕಾರಂಜಿ’ ಅಳವಡಿಸಲಾಗುತ್ತಿದೆ. ಇನ್ನೊಂದು ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ‘ತುಮಕೂರು ಸ್ಕ್ವೇರ್’ ನಿರ್ಮಿಸಲಾಗುತ್ತಿದೆ.
ಈ ಉಭಯ ಯೋಜನೆಗಳನ್ನು ಕೇವಲ ದಸರಾ ಹಬ್ಬಕ್ಕಾಗಿ ಮಾಡುತ್ತಿರುವುದಲ್ಲ, ಶಾಶ್ವತವಾಗಿ ಇರಲಿದ್ದು ನಗರವಾಸಿಗಳನ್ನು ರಂಜಿಸಲಿದೆ. ತುಮಕೂರು ನಗರದ ಸೌಂದರ್ಯವೂ ವೃದ್ಧಿಸಲಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪ್ರಸ್ತುತ ವಾರದ ಪ್ರತಿ ಶನಿವಾರ, ಭಾನುವಾರ ಸಂಗೀತ ಕಾರಂಜಿ ಕಾರ್ಯಾಚರಿಸುವಂತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ, ಆದರೆ ದಿನನಿತ್ಯವೂ ಅಗತ್ಯತೆ ಇದ್ದರೆ ಅದನ್ನು ಮುಂದೆ ನೋಡಿಕೊಂಡು ಆರಂಭಿಸಲಾಗುವುದು. ನೂರು ಮೀಟರ್‌ಗೂ ಹೆಚ್ಚು ಎತ್ತರಕ್ಕೆ ಚಿಮ್ಮುವ ಕಾರಂಜಿಯು ಸುಮಾರು 300 ಅಡಿ ವಿಸ್ತೀರ್ಣಕ್ಕೆ ಹರಡಲಿದ್ದು, ಕಣ್ಣುಗಳಿಗೆ ರಸದೌತಣ ನೀಡಲಿದೆ.
ವಿದೇಶಗಳ ಪ್ರಮುಖ ನಗರಗಳಲ್ಲಿ ಜನಾಕರ್ಷಣೆಯ ಸೆಂಟರ್ ಗಳಿರುತ್ತವೆ. ಉದಾಹರಣೆಗೆ ನ್ಯೂಯಾರ್ಕ್ ನ ನ್ಯೂಯಾರ್ಕ್ ಸ್ಕ್ವೇರ್. ಅದೇ ಮಾದರಿಯಲ್ಲಿ ತುಮಕೂರಿನಲ್ಲಿಯೂ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಸ್ಕ್ವೇರ್ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ. ತುಮಕೂರು ಕೂಡ ಆಧುನಿಕತೆಯಲ್ಲಿ ಮುಂದಿರುವುದನ್ನು ಪ್ರದರ್ಶಿಸಲು ತುಮಕೂರು ಮಹಾನಗರ ಪಾಲಿಕೆಯ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ(ಎಸ್‌ಎಸ್ ವೃತ್ತ) ಬೃಹತ್ ಡಿಸ್‌ಪ್ಲೇ ಬೋರ್ಡ್ ಅಳವಡಿಸಲಾಗುತ್ತಿದೆ. ಸರ್ಕಲ್ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶವಿಲ್ಲ. ಎಸ್‌ಎಸ್ ಸರ್ಕಲ್ ಎಂಬುದು ಹಾಗೆಯೇ ಇರಲಿದೆ. ಆದರೆ ತುಮಕೂರು ಸ್ಕ್ವೇರ್ ಎಂಬ ಇಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್‌ಅನ್ನು ಎಲ್ಲ ದಿಕ್ಕುಗಳಲ್ಲಿಯೂ ಅಳವಡಿಸಲಾಗುತ್ತದೆ.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಸ್ ಪ್ಲೇ ಬೋರ್ಡ್‌ನಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು, ಐತಿಹಾಸಿಕ ಪ್ರಾಮುಖ್ಯತೆಗಳು, ಪ್ರವಾಸಿ ಕೇಂದ್ರಗಳು, ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳು, ಸಂಸ್ಕೃತಿಗಳನ್ನು ಪ್ರದರ್ಶಿಸಲಾಗುವುದು. ಮನರಂಜನೆಯ ವೇದಿಕೆಯಾಗಿಯೂ ಉಪಯೋಗಿಸಲಾಗುವುದು. ಇದರಿಂದ ತುಮಕೂರಿನ ಸಾಮಾನ್ಯ ಜನರಿಗೆ ದೂರದೂರುಗಳ ಪರಿಚಯ ಸಿಗಲಿದೆ. ಗೋಳಗುಮ್ಮಟದಂತಹ ಐತಿಹಾಸಿಕ ಸ್ಥಳಗಳನ್ನು ಇಲ್ಲಿಂದಲೇ ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಸೂಕ್ತ ದಾಖಲೆಗಳನ್ನು ಒದಗಿಸಿದರೆ ಪಿಂಚಣಿ ಮುಂದುವರಿಯಲಿದೆ: ನಮ್ಮ ಸರ್ಕಾರವು ಪಿಂಚಣಿಯ ಗರಿಷ್ಠ ಆದಾಯ ಮಿತಿಯನ್ನು 33 ಸಾವಿರ ರೂ.ಗಳಿಂದ 1.2 ಲಕ್ಷ ರೂ. ಗೆ ಏರಿಕೆ ಮಾಡಿದೆ. ಇದೀಗ ಸ್ಥಗಿತಗೊಂಡಿರುವ ಪಿಂಚಣಿದಾರರು ಸೂಕ್ತ ವಯಸ್ಸಿನ ದೃಢೀಕರಣ ಪತ್ರ, ಆದಾಯ ಮತ್ತು ವಿಳಾಸ ಪ್ರಮಾಣಪತ್ರಗಳನ್ನು ಒದಗಿಸಿದರೆ ಪಿಂಚಣಿ ಮುಂದುವರಿಯಲಿದೆ. ವಯಸ್ಸು ಆಗದವರೂ, ಟ್ಯಾಕ್ಸ್ ಕಟ್ಟುವವರು, ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಸೇವೆಗೈದ ಹೆಮ್ಮೆಯ ಮಾಜಿ ಯೋಧರ ಸ್ವಂತ ಸೂರಿನ ಕನಸಿಗೆ ನಮ್ಮ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ವಸತಿ ರಹಿತರಿಗಾಗಿ ಪ್ರತಿ ಜಿಲ್ಲೆಯಲ್ಲಿ 30×40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ನೂತನ ಯೋಜನೆಯನ್ನು ನಾವು ಜಾರಿಗೊಳಿಸಲು ಹೊರಟಿದ್ದು, ಇದರಡಿ ಮಾಜಿ ಯೋಧರಿಗೂ ನಿವೇಶನ ನೀಡಲಾಗುವುದು. ಮೊದಲ ಹಂತದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದ್ದೇವೆ. ಸ್ವಂತ ಸೂರಿರದ ಕುಟುಂಬಗಳ ದಶಕಗಳ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

