ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡುವುದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಯಾವುದೇ ಕಾರಣಕ್ಕೂ ಪೊಲೀಸರ ಅಧಿಕೃತ ಕರ್ತವ್ಯದ ಭಾಗವಾಗುವುದಿಲ್ಲ, ಇದು ಅಪರಾಧ ಎಂದು ಅಲಹಾಬಾದ್ ಹೈಕೋರ್ಟ್ ಖಡಕ್‌ಆಗಿ ಹೇಳಿದೆ. ಸಂತ್ರಸ್ತರನ್ನು ಕೈ-ಕಾಲು ಕಟ್ಟಿ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧದ ಪ್ರಕರಣದಲ್ಲಿ, ‘ಇಂತಹ ಕೃತ್ಯಗಳು ಸ್ಪಷ್ಟವಾಗಿ ಅಪರಾಧ’ ಎಂದು ಹೇಳಿರುವ ನ್ಯಾಯಾಲಯ, ಆರೋಪಿತ ಪೊಲೀಸ್ ಸಿಬ್ಬಂದಿಯ ಡಿಸ್ಚಾರ್ಜ್ ಅರ್ಜಿಗಳನ್ನು ತಿರಸ್ಕರಿಸಿದೆ.
ಹೌದು.ಲ ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡುವುದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಮುಂತಾದ ಕೃತ್ಯಗಳು ಪೊಲೀಸರ ಕರ್ತವ್ಯದ ಭಾಗವಲ್ಲ. ಇಂತಹ ಕೃತ್ಯಗಳು ಘೋರ ಅಪರಾಧಗಳಾಗಿವೆ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಸಲ್ಲಿಸಿದ್ದ ಡಿಸ್ಚಾರ್ಜ್ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಸಂತ್ರಸ್ತರ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ, ಹೊಟ್ಟೆಕೆಳಗೆ ಮಲಗಿಸಿ ಪದೇಪದೇ ಥಳಿಸಲಾಗಿದೆ ಎಂಬ ಆರೋಪಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
ಸೆಪ್ಟೆಂಬರ್ 9ರಂದು ನೀಡಿದ ತೀರ್ಪಿನಲ್ಲಿ, ಇಂತಹ ಹಿಂಸೆಯನ್ನು ಯಾವುದೇ ಸಂದರ್ಭದಲ್ಲೂ ಅಧಿಕೃತ ಕರ್ತವ್ಯ ನಿರ್ವಹಣೆಯ ಭಾಗವೆಂದು ಪರಿಗಣಿಸಲು ಸಾಧ್ಯವಿಲ್ಲ. ಇವು ಸ್ಪಷ್ಟವಾಗಿ ಅಪರಾಧಗಳ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಹೇಳಿದೆ.
ತನಿಖೆಯ ವೇಳೆ ಪೊಲೀಸರು ತಮ್ಮ ಮಿತಿಯನ್ನು ಮೀರಿದ್ದಾರೆ ಎಂಬ ವಾದವನ್ನು ಮಾತ್ರ ಮುಂದಿಟ್ಟುಕೊಂಡು ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ವೇಳೆ ಮಾಡಿದ ಕೃತ್ಯಗಳಿಗೆ ವಿಚಾರಣೆ ಆರಂಭಿಸುವ ಮುನ್ನ ಪೂರ್ವಾನುಮತಿ ಕಡ್ಡಾಯಗೊಳಿಸುವ ಸಿಆರ್‌ಪಿಸಿ ಸೆಕ್ಷನ್ 197ರ ರಕ್ಷಣೆಯನ್ನು ಇಂತಹ ಆರೋಪಗಳನ್ನು ಎದುರಿಸುತ್ತಿರುವ ಪೊಲೀಸರು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಬಬೇರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ಕೋರ್ಟ್ 2024ರ ಸೆಪ್ಟೆಂಬರ್ 27ರಂದು ಪೊಲೀಸ್ ಸಿಬ್ಬಂದಿಯ ಡಿಸ್ಚಾರ್ಜ್ ಅರ್ಜಿಗಳನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಹಿನ್ನೆಲೆ
2022ರಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ತೆರಳಿದ್ದ ಕಾನ್‌ಸ್ಟೆಬಲ್‌ಗಳ ಮೇಲೆ ಕೆಲವರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದರ ಹಿನ್ನೆಲೆಯಲ್ಲಿ 2022ರ ಮೇ 13ರ ರಾತ್ರಿ ನಾಲ್ವರು ಮಹಿಳೆಯರನ್ನು ಹಾಗೂ ಮರುದಿನ ನಾಲ್ವರು ಪುರುಷರನ್ನು ಪೊಲೀಸರು ಬಂಧಿಸಿದ್ದರು.
ಆದರೆ ಪೊಲೀಸ್ ಕ್ರಮದ ವೇಳೆ ತಮ್ಮ ಮೇಲೆ ಅಕ್ರಮವಾಗಿ ಹಲ್ಲೆ ನಡೆಸಲಾಗಿದೆ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಲಾಗಿದೆ, ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಲಾಗಿದೆ ಹಾಗೂ ತಮ್ಮ ವಿರುದ್ಧ ಕಳ್ಳತನದ ಪ್ರಕರಣಗಳನ್ನು ಸುಳ್ಳು ರೀತಿಯಲ್ಲಿ ದಾಖಲಿಸಲಾಗಿದೆ ಎಂದು ಸಂತ್ರಸ್ತರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿತ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಕೆಳ ನ್ಯಾಯಾಲಯದಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಟ್ರಯಲ್ ಕೋರ್ಟ್ ನೀಡಿದ್ದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದ ಅಲಹಾಬಾದ್ ಹೈಕೋರ್ಟ್, ಪೊಲೀಸ್ ಸಿಬ್ಬಂದಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ.

