ಗದ್ವಾಲ್: ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ, ಆಕೆಯ ಒಪ್ಪಿಗೆಯೊಂದಿಗೆ ವಿವಾಹವಾದ ದಲಿತ ಯುವಕನ ಮನೆಯನ್ನೇ ಯುವತಿಯ ಕುಟುಂಬಸ್ಥರು ಟ್ರ್ಯಾಕ್ಟರ್ ಗಳಿಂದ ಧ್ವಂಸ ಮಾಡಿರುವ ಘಟನೆ ತೆಲಂಗಾಣದ ಗದ್ವಾಲ್ ಗ್ರಾಮೀಣ ಮಂಡಲದ ರೇಪಳ್ಳಿ ಗ್ರಾಮದಲ್ಲಿ ನಡೆದಿದೆ.
ಹೈದರಾಬಾದ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರೇಪಳ್ಳಿ ಗ್ರಾಮದ ಬೋಯ ಮಹೇಶ್ವರಿ, ಅದೇ ಗ್ರಾಮದ ದಲಿತ ಯುವಕನನ್ನು ವಿವಾಹವಾಗಿದ್ದರು. ಮದುವೆಗೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಯುವಕನ ಮನೆಗೆ ತೆರಳಿ ಜೆಸಿಬಿ ಮೂಲಕ ಮನೆ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರ ಪ್ರಕಾರ, ರೇಪಳ್ಳಿ ಗ್ರಾಮದ ಪ್ರಭುದಾಸ್ ಅವರ ಪುತ್ರ ರಂಗಮುನಿ (26) ಹಾಗೂ ಅದೇ ಗ್ರಾಮದ ತುಮ್ಮಲಪಳ್ಳಿ ಈರಣ್ಣ ಅವರ ಪುತ್ರಿ ಮಹೇಶ್ವರಿ (21) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಭುದಾಸ್ ಕುಟುಂಬ ಜೀವನೋಪಾಯಕ್ಕಾಗಿ ಹೈದರಾಬಾದ್‌ಗೆ ವಲಸೆ ಹೋಗಿದ್ದು, ರಂಗಮುನಿ ಅಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮಹೇಶ್ವರಿ ಪದವಿ ಪೂರ್ಣಗೊಳಿಸಿದ್ದು, ಹೈದರಾಬಾದ್‌ನಲ್ಲೇ ಖಾಸಗಿ ಉದ್ಯೋಗದಲ್ಲಿದ್ದಾರೆ.
ಇಬ್ಬರೂ ಬುಧವಾರ ವಿವಾಹವಾಗಿದ್ದು, ಬಳಿಕ ರಕ್ಷಣೆ ಕೋರಿ ಪೊಲೀಸರನ್ನು ಸಂಪರ್ಕಿಸಿದ್ದರು. ಪೊಲೀಸರು ರೇಪಳ್ಳಿಯಿಂದ ಯುವತಿಯ ಪೋಷಕರನ್ನು ಕರೆಸಿದ್ದರು. ಈ ವೇಳೆ ತಾನು ಪ್ರಾಪ್ತವಯಸ್ಕಳಾಗಿದ್ದು, ತನ್ನ ಇಚ್ಛೆಯಿಂದಲೇ ರಂಗಮುನಿಯನ್ನು ಮದುವೆಯಾಗಿದ್ದೇನೆ. ಪೋಷಕರೊಂದಿಗೆ ತೆರಳುವುದಿಲ್ಲ ಎಂದು ಮಹೇಶ್ವರಿ ಪೊಲೀಸರ ಮುಂದೆ ಸ್ಪಷ್ಟಪಡಿಸಿದ್ದಾಗಿ ತಿಳಿದುಬಂದಿದೆ.
ಬಳಿಕ ಪೊಲೀಸರು ಯುವತಿಯ ಪೋಷಕರಿಗೆ ಕೌನ್ಸೆಲಿಂಗ್ ನೀಡಿ ಕಳುಹಿಸಿದ್ದರು. ಆದರೆ ಗ್ರಾಮಕ್ಕೆ ಹಿಂದಿರುಗಿದ ಯುವತಿಯ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡು ತಮ್ಮ ಸಂಬಂಧಿಕರು ಹಾಗೂ ಸಮುದಾಯದವರನ್ನು ಒಗ್ಗೂಡಿಸಿದ್ದಾರೆ.
ನಂತರ ಟ್ರಾಲಿ ಮತ್ತು ಕಲ್ಟಿವೇಟರ್‌ಗಳನ್ನು ಹೊಂದಿದ್ದ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ರಂಗಮುನಿಯ ಮನೆಗೆ ತೆರಳಿದ ಅವರು ಇಡೀ ಮನೆಯನ್ನು ನೆಲಸಮ ಮಾಡಿದ್ದಾರೆ. ಅಲ್ಲದೆ, ಅದೇ ಆವರಣದಲ್ಲಿದ್ದ ರಂಗಮುನಿಯ ಚಿಕ್ಕಪ್ಪನ ಮನೆಯನ್ನೂ ಧ್ವಂಸ ಮಾಡಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಎರಡು ದಿನಗಳ ಕಾಲ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗುವುದು ಎಂದು ಸಿಐ ಟಂಗುಟೂರು ಶ್ರೀನು ತಿಳಿಸಿದ್ದಾರೆ.
ರೇಪಳ್ಳಿ ಗ್ರಾಮದ ಜನಸಂಖ್ಯೆ ಸುಮಾರು 1,200 ಇದ್ದು, ಅವರಲ್ಲಿ ಸುಮಾರು ಶೇ.80ರಷ್ಟು ಮಂದಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ. ಗ್ರಾಮದಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದ ಕೆಲವೇ ಕುಟುಂಬಗಳ ಮನೆಗಳಿವೆ.
ಘಟನೆ ನಡೆದ ವೇಳೆ ಸಂತ್ರಸ್ತ ಕುಟುಂಬದ ಸದಸ್ಯರು ಹಾಗೂ ರಂಗಮುನಿಯ ಚಿಕ್ಕಪ್ಪ ಗ್ರಾಮದಲ್ಲಿ ಇರಲಿಲ್ಲ. ಎರಡೂ ಮನೆಗಳಿಗೆ ಬೀಗ ಹಾಕಲಾಗಿತ್ತು. ಈ ವೇಳೆ ಯುವತಿಯ ಕುಟುಂಬಸ್ಥರು ಆ ಮನೆಗಳನ್ನು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಗಳ ಪೈಕಿ ಮೂವರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಬಳಿಕ ರೇಪಳ್ಳಿ ಗ್ರಾಮದಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಿಚಾರಣೆ ಮುಂದುವರಿಸಿದ್ದಾರೆ. ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ನಡೆದ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

