ಬೆಂಗಳೂರು : ರಂಜಾನ್ ಹಬ್ಬದ ಪ್ರಾರ್ಥನೆಯ ಹಿನ್ನೆಲೆಯಲ್ಲಿ ಮಾರ್ಚ್ 21ರಂದು ನಗರದ ಆರ್.ಟಿ. ನಗರ ಮತ್ತು ನಂದಿದುರ್ಗ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿವಿಧ ಹಂತಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ದಿನಾಂಕ: 21.03.2026 ರಂದು ಬೆಳಗ್ಗೆ 08-00 ಗಂಟೆಯಿಂದ ಬೆಳಗ್ಗೆ 09-30 ಗಂಟೆಯವರೆಗೆ ಆರ್.ಟಿ.ನಗರದ 80 ಅಡಿರಸ್ತೆಯ ಹೆಚ್.ಎಂ.ಟಿ. ಮೈದಾನದ ಮುಂಭಾಗ ಹಾಗೂ ಬೆಳಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯ ವರೆಗೆ ನಂದಿದುರ್ಗ ರಸ್ತೆ (ದರ್ಗಾ ಮುಂಭಾಗ) ರಂಜಾನ್ ಹಬ್ಬದ ಪ್ರಾರ್ಥನೆಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರುವುದರಿಂದ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
ಸಿ.ಬಿ.ಐ. ರಸ್ತೆಯ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ ಹಾಗೂ ದಿಣ್ಣೂರು ಮುಖ್ಯರಸ್ತೆಯ ಕಡೆಗೆ ಹೋಗುವ ವಾಹನಗಳು ಬೆಳಗ್ಗೆ 08-00 ಗಂಟೆಯಿಂದ ಬೆಳಗ್ಗೆ 09-30 ಗಂಟೆಯ ವರೆಗೆ ಸಂಜಯನಗರ ಕ್ರಾಸ್ ಕಡೆಯಿಂದ ಫೋರ್‌ಸೀಜನ್ ಹೋಟೆಲ್‌ನ ಮುಂಭಾಗದ ಬಿಬಿ ರಸ್ತೆಯ ಮೂಲಕ ಬಂದು ತರಳಬಾಳು ರಸ್ತೆಗೆ ಎಡ ತಿರುವು ಪಡೆದು ಗುಂಡೂರಾವ್ ಸರ್ಕಲ್ – ವಾಟರ್ ಟ್ಯಾಂಕ್ – ಪಿಆರ್‌ಟಿ ಜಂಕ್ಷನ್ ಮೂಲಕ ದೇವೇಗೌಡ ರಸ್ತೆಯ ಕಡೆಗೆ ಸಂಚರಿಸುವುದು.
ಜಯಮಹಲ್ ರಸ್ತೆಯಿಂದ ಆರ್.ಟಿ ನಗರ ಮತ್ತು ದಿಣ್ಣೂರು ಕಡೆಗೆ ಬರುವ ವಾಹನಗಳು ಸಿ.ಕ್ಯೂ.ಎ.ಎಲ್ ಕ್ರಾಸ್‌ನಿಂದ ವಾಟರ್ ಟ್ಯಾಂಕ್ ಜಂಕ್ಷನ್ – ಪಿಆರ್‌ಟಿ ಜಂಕ್ಷನ್ ಮೂಲಕ ದೇವೇಗೌಡ ರಸ್ತೆಯ ಮುಖಾಂತರ ಸಂಚರಿಸುವುದು. ಜಯಮಹಲ್ ರಸ್ತೆಯ ಜೆ.ಸಿ.ನಗರ ಪಿ.ಎಸ್. ಜಂಕ್ಷನ್‌ನಿಂದ ನಂದಿದುರ್ಗ ರಸ್ತೆಯ ಹಜ್‌ಭವನದ ಕಡೆಗೆ ಸಂಚರಿಸುವ ವಾಹನಗಳು ಬೆಳಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯ ವರೆಗೆ ಪ್ರಿಯದರ್ಶಿನಿ-ಜಯಮಹಲ್ ಪ್ಯಾಲೇಸ್ ಗೇಟ್ ಮೂಲಕ ಕಂಟೋನ್ಮೆಂಟ್‌ನಿಂದ ಮಿಲ್ಲರ್ಸ್‌ರಸ್ತೆಯ ಹಜ್‌ಭವನದ ಮೂಲಕ ಸಂಚರಿಸುವುದು. ಮಿಲ್ಲರ್ಸ್‌ರಸ್ತೆಯ ಹಜ್‌ಭವನದಿಂದ ಬರುವ ವಾಹನಗಳು ಕಂಟೋನ್ಮೆಂಟ್‌ನಿಂದ ಜಯಮಹಲ್ ಪ್ಯಾಲೇಸ್ ಗೇಟ್ ಮೂಲಕ ಜಯಮಹಲ್ ರಸ್ತೆಗೆ ಸಂಚರಿಸಬಹುದಾಗಿದೆ.

