ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಮಗು ಜನಿಸಿದ 7 ದಿನದಲ್ಲೇ ಮಾರಾಟಕ್ಕೆ ಯತ್ನಿಸಿದ ದಂಪತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ದಂಪತಿ ಪತಿ, ಪತ್ನಿ ಅಲ್ಲ. ಲಿವಿಂಗ್ ಟುಗೆದರ್ ರೀತಿ ಸಂಸಾರ ಮಾಡಿಕೊಂಡಿದ್ದಾರೆ. ಮಹಿಳೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಮೊದಲ ಗಂಡನಿಗೆ ಒಂದು ಗಂಡು ಮಗುವಿತ್ತು. ಎರಡನೇ ಗಂಡನಿಗೆ ಒಂದು ಮಗುವಿದೆ. ಈ ನಡುವೆ ಮೂರನೇ ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ವೇಳೆ ಸಿಕ್ಕಿಬಿದ್ದಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ನಿವಾಸಿ ಮಹಿಳೆಗೆ ಈ ಮೊದಲು ಸಂತೋಷ್ ಎಂಬುವರ ಜೊತೆಗೆ ಮದುವೆಯಾಗಿದ್ದು, ಒಂದು ಗಂಡು ಮಗುವಾಗಿದ್ದು, ಕೌಟುಂಬಿಕ ಕಲಹದ ಕಾರಣ ಸಂತೋಷ್ ನನ್ನು ತೊರೆದಿದ್ದು, ರಾಘವೇಂದ್ರ ಜೊತೆಗೆ ವಾಸವಾಗಿದ್ದರು. ರಾಘವೇಂದ್ರನಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಮಹಿಳೆ ಗರ್ಭಿಣಿಯಾಗಿದ್ದಳು. ರಾಘವೇಂದ್ರ ಮತ್ತು ಮಹಿಳೆಗೆ ಮಗು ಬೇಡವಾಗಿತ್ತು.
ನಾರಾಯಣಸ್ವಾಮಿ ಎಂಬಾತ ಪರಿಚಯದವರೊಬ್ಬರಿಗೆ ಮಗು ಕೊಟ್ಟರೆ 5 ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಮತ್ತು ಮಂಜುಳಾ ದಂಪತಿಗೆ ಮಗು ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದ. ಏಳು ದಿನದ ಹಿಂದೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವನ್ನು ಬಾಲಕೃಷ್ಣ ದಂಪತಿಗೆ ಕೊಟ್ಟಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿ ಐವರನ್ನು ಬಂಧಿಸಿದ್ದಾರೆ. 80 ಸಾವಿರ ರೂ. ಜಪ್ತಿ ಮಾಡಿದ್ದಾರೆ. ಮಗು ಮಾರಾಟ ಮಾಡಿದ್ದ ದಂಪತಿ, ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಬಂಧಿಸಲಾಗಿದೆ.

