ಚಿತ್ರಮಂದಿರಗಳಲ್ಲಿ ಸೋತ ಚಿತ್ರಗಳು ಡಿಜಿಟಲ್ ಮಾಧ್ಯಮದಲ್ಲಿ ಭರ್ಜರಿ ಯಶಸ್ಸು ಕಾಣುವುದು ಹೊಸದೇನಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂಬಂತೆ, ಟಾಲಿವುಡ್ ನಟ ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ರಕುಲ್ ಪ್ರೀತ್ ಸಿಂಗ್ ನಟನೆಯ ‘ಜಯ ಜಾನಕಿ ನಾಯಕ’ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆದಿದೆ. ಬಿಡುಗಡೆಯಾದ ಒಂಬತ್ತು ವರ್ಷಗಳ ನಂತರ ಈ ಚಿತ್ರ ಯೂಟ್ಯೂಬ್ನಲ್ಲಿ ಬರೋಬ್ಬರಿ 100 ಕೋಟಿಗೂ (1 ಬಿಲಿಯನ್) ಅಧಿಕ ವೀಕ್ಷಣೆಗಳನ್ನು ಪಡೆದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೋಯಪಾಟಿ ಶ್ರೀನು ನಿರ್ದೇಶನದ ಈ ರೋಮ್ಯಾಂಟಿಕ್ ಆಕ್ಷನ್ ಚಿತ್ರ 2017 ರಲ್ಲಿ ತೆರೆಕಂಡಾಗ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಸೋತಿತ್ತು. ಆದರೆ, ಈ ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯಾದ ‘ಖೂನ್ಖಾರ್’ ಅನ್ನು ಪೆನ್ ಮೂವೀಸ್ ಯೂಟ್ಯೂಬ್ ವಾಹಿನಿಯಲ್ಲಿ ಅಪ್ಲೋಡ್ ಮಾಡಿದ ನಂತರ ಹಿಂದಿ ವೀಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರಕುಲ್ ಪ್ರೀತ್ ಸಿಂಗ್
ಚಿತ್ರದ ಈ ಐತಿಹಾಸಿಕ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿರುವ ನಟಿ ರಕುಲ್ ಪ್ರೀತ್ ಸಿಂಗ್, ಕೆಲವು ಪಾತ್ರಗಳು ಸದಾ ನಮ್ಮ ಹೃದಯದಲ್ಲಿ ಉಳಿಯುತ್ತವೆ, ಅದರಲ್ಲಿ ಜಾನಕಿ ಪಾತ್ರವೂ ಒಂದು ಎಂದು ಹೇಳಿದ್ದಾರೆ. ಜಯ ಜಾನಕಿ ನಾಯಕ ಚಿತ್ರವನ್ನು ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಸಿನಿಮಾವನ್ನಾಗಿ ಮಾಡಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಈ ಮೈಲಿಗಲ್ಲು ತಮಗೆ ಅತ್ಯಂತ ವಿಶೇಷವಾದುದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ಬೋಯಪಾಟಿ ಶ್ರೀನು ಮತ್ತು ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಮತ್ತೊಂದೆಡೆ ಚಿತ್ರದ ನಿರ್ದೇಶಕ ಬೋಯಪಾಟಿ ಶ್ರೀನು ಕೂಡ ಈ ಯಶಸ್ಸನ್ನು ಸಂಭ್ರಮಿಸಿದ್ದು, ಇದು 100 ಕೋಟಿ ಭಾವನೆಗಳ ವಿಜಯ ಎಂದು ಬಣ್ಣಿಸಿದ್ದಾರೆ. ಈ ನಂಬಲಾಗದ ಮೈಲಿಗಲ್ಲನ್ನು ಸಾಧಿಸಿದ ವಿಶ್ವದ ಮೊದಲ ಸಿನಿಮಾ ಇದಾಗಿದ್ದು, ಚಿತ್ರವನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದ ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಮುಗ್ಗರಿಸಿದರೂ ಡಿಜಿಟಲ್ ಲೋಕದಲ್ಲಿ ಈ ಸಿನಿಮಾ ಸಾರ್ವಕಾಲಿಕ ದಾಖಲೆ ಬರೆದಿರುವುದು ಸಿನಿಕುತೂಹಲಿಗಳ ಗಮನ ಸೆಳೆದಿದೆ.



